ವಿದ್ಯಾದಾನವೇ ಮಹಾದಾನವಾಗಿದೆ : ಸಯ್ಯಿದ್ ಹಬೀಬ್ ಆದಿಲ್ ಉಮರ್ ಅಲ್ ಜಿಫ್ರೀ
ಹಾವೇರಿಯ ‘ಮುಈನುಸುನ್ನಾ ’ ಸಂಸ್ಥೆಯ ದಶಮ ಸಂಭ್ರಮಕ್ಕೆ ಚಾಲನೆ
ಮಂಗಳೂರು: ವಿದ್ಯಾದಾನವೇ ಮಹಾದಾನವಾಗಿದೆ. ಎಲ್ಲ ದೌರ್ಬಲ್ಯಗಳಿಗೆ ಶಿಕ್ಷಣದ ಕೊರತೆಯೇ ಕಾರಣ ವಾಗಿದೆ. ಶಿಕ್ಷಣವನ್ನು ವ್ಯಾಪಕಗೊಳಿಸುವ ಮೂಲಕ ಮಾತ್ರವೇ ದುರ್ಬಲರಿಗೆ ಶಕ್ತಿ ನೀಡಲು ಸಾಧ್ಯ ಎಂದು ಖ್ಯಾತ ಆಧ್ಯಾತ್ಮಿಕ ನಾಯಕ ಮದೀನಾದ ಸಯ್ಯಿದ್ ಹಬೀಬ್ ಆದಿಲ್ ಉಮರ್ ಅಲ್ ಜಿಫ್ರೀ ಅಭಿಪ್ರಾಯಪಟ್ಟರು.
ಹತ್ತನೇ ವರ್ಷಕ್ಕೆ ಪಾದಾರ್ಪಣೆಗೈದಿರುವ ಉತ್ತರ ಕರ್ನಾಟಕದ ಬಯಲು ಸೀಮೆಯ ಗ್ರಾಮೀಣ ಪ್ರದೇಶಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸ್ಥಾಪಿತವಾದ ಹಾವೇರಿಯ ‘ಮುಈನುಸುನ್ನಾ ’ ಸಂಸ್ಥೆಯ ದಶಮ ಸಂಭ್ರಮಕ್ಕೆ ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಮಲಪ್ಪುರಂ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ತ್ವಾಹಿರ್ ಸಖಾಫಿ ಮಂಜೇರಿ ದಿಕ್ಚೂಚಿ ಭಾಷಣ ಮಾಡಿದರು.
ಮುಈನುಸುನ್ನಾ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಅಬ್ದುರ‌್ರಹ್ಮಾನ್ ಶಹೀರ್ ಅಲ್ ಬುಖಾರಿ ಅಧ್ಯಕ್ಷೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ. ಫಾಝಿಲ್ ರಝ್ವಿ ಹಝ್ರತ್ ಕಾವಳಕಟ್ಟೆ ಉದ್ಘಾಟಿಸಿದರು.
ಸ್ಪೀಕರ್‌ಗೆ ಸನ್ಮಾನ: ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಇದೇ ಸಂದರ್ಭದಲ್ಲಿ ಮುಈನುಸುನ್ನಾ ಪರವಾಗಿ ಸಯ್ಯಿದ್ ಹಬೀಬ್ ಆದಿಲ್ ಉಮರ್ ಅಲ್ ಜಿಫ್ರೀ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಅವರು ವರ್ಷಗಳ ಹಿಂದೆ ಮುಈನುಸುನ್ನಾ ಸಂಸ್ಥೆಗೆ ಭೇಟಿ ನೀಡಿದ್ದೆ. ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳ ಪ್ರಗತಿಗೆ ಅನನ್ಯ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಇಸ್ಲಾಮಿಕ್ ಕಲ್ಚರ್ ಸೆಂಟರ್‌ನ ಕಾರ್ಯದರ್ಶಿ ಮುಮ್ತಾಝ್ ಆಲಿ ಕೃಷ್ಣಾಪುರ, ದಶಮ ಸಂಭ್ರಮ ಸಮಿತಿ ಕಾರ್ಯದರ್ಶಿ ಜಿ.ಎಂ .ಕಾಮಿಲ್ ಸಖಾಫಿ, ಉಪಾಧ್ಯಕ್ಷ ಸೈಯ್ಯಿದ್ ಮುನೀರುಲ್ ಅಹದಲ್ ತಂಙಳ್, ಎಸ್‌ವೈಎಸ್ ಮಾಜಿ ರಾಜ್ಯಾಧ್ಯಕ್ಷ ಡಾ.ಎಂಎಸ್‌ಎಂ ಝೈನಿ ಕಾಮಿಲ್ ಸಖಾಫಿ, ಎಸ್‌ಜೆಎಂ ರಾಜ್ಯ ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿ, ಎಸ್‌ಎಂಎ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮದನಿ ಜೆಪ್ಪು, ಸಮಾಜ ಸೇವಕರಾದ ಇಬ್ರಾಹೀಂ ಕೋಡಿಜಾಲ್ , ಮನ್ಸೂರ್ ಅಹ್ಮದ್ ಆಝಾದ್ , ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್ಸೆಂ ರಶೀದ್ ಹಾಜಿ, ಅಡ್ವೆಕೇಟ್ ಬಶೀರ್ ಅಹ್ಮದ್, ವ್ಯಕ್ತಿತ್ವ ವಿಕಸನ ತರಬೇತುದಾರ ರಫೀಕ್ ಮಾಸ್ಟರ್, ಕೆಸಿಎಫ್ ಅಂತರ್ ರಾಷ್ಟ್ರೀಯ ವೇದಿಕೆಯ ಅಧ್ಯಕ್ಷ ಯೂಸುಫ್ ಸಖಾಫಿ ಉಪಸ್ಥಿತರಿದ್ದರು.
ದಶಮ ಸಂಭ್ರಮ ಸಮಿತಿ ಅಧ್ಯಕ್ಷ ಡಾ. ಶೇಖ್ ಬಾವಾ ಮಂಗಳೂರು ಸ್ವಾಗತಿಸಿದರು. ನಿರ್ದೇಶಕ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ. ಎಂ.ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ವಂದಿಸಿದರು.