2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ನಿಷೇಧಿಸಲು ಪ್ಯಾರಿಸ್ ನಿರ್ಧಾರ
ಪ್ಯಾರಿಸ್, ಮೇ 26: ಜಾಗತಿಕ ಪ್ಲಾಸ್ಟಿಕ್ ಮಾಲಿನ್ಯದ ಬಿಕ್ಕಟ್ಟನ್ನು ನಿಭಾಯಿಸುವ ಪ್ರಯತ್ನಗಳ ಭಾಗವಾಗಿ 2024ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸುವಾಗ ನಗರವು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಯೋಜಿಸಿದೆ ಎಂದು ಪ್ಯಾರಿಸ್ ಮೇಯರ್ ಅನ್ನೆ ಹಿಡಾಲ್ಗೊ ಶುಕ್ರವಾರ ಹೇಳಿದ್ದಾರೆ.
ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಮೇಯರ್ಗಳ ಅಂತರ್ರಾಷ್ಟ್ರೀಯ ವೇದಿಕೆಯ ಅಧಿವೇಶನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಡಾಲ್ಗೊ, ಮೊದಲ ಪ್ರಮುಖ ಸ್ಪರ್ಧೆಯಾಗಿರುವ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಏಕ ಬಳಕೆಯ ಪ್ಲಾಸ್ಟಿಕ್ ಇಲ್ಲದೆಯೇ ಆಯೋಜಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಫ್ರಾನ್ಸ್ ರಾಜಧಾನಿಯಲ್ಲಿ ತಾತ್ಕಾಲಿಕ ಒಲಿಂಪಿಕ್ಸ್ ಸ್ಪರ್ಧೆಯ ಸ್ಥಳಗಳಿಗೆ ಪ್ಲಾಸ್ಟಿಕ್ ಬಾಟಲಿಗಳಿಲ್ಲದೆ ಇರುವವರಿಗೆ ಮಾತ್ರ ಭೇಟಿ ನೀಡಲು ಅನುಮತಿಸಲಾಗುತ್ತದೆ.
ಅಮೆರಿಕದ ತಂಪುಪಾನೀಯ ದೈತ್ಯ ಕಂಪೆನಿ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ಗೆ ಗೊತ್ತುಪಡಿಸಿದ ಪ್ರಾಯೋಜಕರಾದ ಕೋಕಾ-ಕೋಲಾ ತನ್ನ ಉತ್ಪನ್ನಗಳನ್ನು ಮರು ಬಳಕೆ ಮಾಡಬಹುದಾದ ಗಾಜಿನ ಬಾಟಲಿಗಳು ಹಾಗೂ 200ಕ್ಕೂ ಹೆಚ್ಚು ಸೋಡ ಫೌಂಟೈನ್ಗಳಲ್ಲಿ ವಿತರಿಸಲಿದೆ. ಇವುಗಳನ್ನು ಗೇಮ್ಸ್ ನಂತರ ಮರು ಹಂಚಿಕೆ ಮಾಡಲಾಗುತ್ತದೆ. ಪ್ಲಾಸ್ಟಿಕ್(ತ್ಯಾಜ್ಯ)ಒಂದು ಪ್ರಮುಖ ಜಾಗತಿಕ ಸಮಸ್ಯೆಯಾಗಿ ಉಳಿದಿದೆ.
ಪ್ರತೀ ವರ್ಷ 14,000 ಸಸ್ತನಿಗಳು ಹಾಗೂ 1.4 ಮಿಲಿಯನ್ ಸಮುದ್ರ ಪಕ್ಷಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇವಿಸುವುದರಿಂದ ಸಾಯುತ್ತವೆ ಎಂದು ಹಿಡಾಲ್ಗೊ ಕಚೇರಿಯು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಘೋಷಿಸುವ ಹೇಳಿಕೆಯಲ್ಲಿ ತಿಳಿಸಿದೆ.