ಕಾಂಗ್ರೆಸ್ ಶಾಸಕನಾಗಿದ್ದರೂ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ: ಶಾಸಕ ಎಚ್.ಡಿ ತಮ್ಮಯ್ಯ

ಚಿಕ್ಕಮಗಳೂರು: 'ಕಾಂಗ್ರೆಸ್ ಶಾಸಕನಾಗಿದ್ದರೂ, ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ' ಎಂದು ಚಿಕ್ಕಮಗಳೂರು ಕ್ಷೇತ್ರದ ನೂತನ ಶಾಸಕ ಎಚ್.ಡಿ ತಮ್ಮಯ್ಯ ಹೇಳಿದ್ದಾರೆ.
ಗುರುವಾರ ರಾತ್ರಿ ಗವನಹಳ್ಳಿ, ರಾಂಪುರ ಗ್ರಾಮಗಳ ಸಾಮಿಲ್ ಮಾಲಕರ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, 'ಹಿಂದೆ ಸಂಘದ ಕಾರ್ಯಕ್ರಮಗಳಿಗಾಗಿ ದಾನಿಗಳ ಬಳಿ ಹೋದಾಗ 500 ರೂ. ಕೊಟ್ಟರೆ ಅದೇ ನಮಗೆ ದೊಡ್ಡ ಮೊತ್ತ. ಇದನ್ನು ವಸೂಲಿ ಅಂತ ನಾವು ಎಲ್ಲೂ ಹೇಳಲ್ಲ, ಏಕೆಂದರೆ ಸಂಗ್ರಹ ಅಂತಾನೇ ಹೇಳಬೇಕು ಎಂದು ಸಂಘದ ಮುಖಂಡರು ಹೇಳಿಕೊಟ್ಟಿದ್ದರು' ಎಂದು ನೆನಪಿಸಿಕೊಂಡಿದ್ದಾರೆ.
'ಬಿಜೆಪಿಯಲ್ಲಿ 16 ವರ್ಷ ಇದ್ದು ಸಂಘದ ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದೆ, ಈಗಲೂ ಸಂಘದ ಸ್ವಯಂ ಸೇವಕನಾಗಿದ್ದೇನೆ. ಆದರೆ, ನಾನು ಜಾತ್ಯತೀತ ವ್ಯಕ್ತಿ. ಅಂದರೆ ಎಲ್ಲರನ್ನೂ ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಿಟ್ಟನಲ್ಲಿ ಕೆಲಸ ಮಾಡುವೆ. ಪ್ರಮಾಣ ವಚನ ಸ್ವೀಕರಿಸುವಾಗ ಕೂಡ ಅದೇ ನಿಟ್ಟಿನಲ್ಲಿ ಸ್ವೀಕರಿಸಿದ್ದೇನೆ. ಆದ್ದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡುವುದು ನನ್ನ ಮೊದಲ ಆದ್ಯತೆ' ಎಂದು ಎಚ್‌ಡಿ ತಮ್ಮಯ್ಯ ಹೇಳಿದ್ದಾರೆ.
ತಮ್ಮಯ್ಯ ಅವರ ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ ವಿರೋಧದ ಚರ್ಚೆ ನಡೆಯುತ್ತಿದ್ದು, 'ತಾನು ಆರೆಸ್ಸೆಸ್ ಸ್ವಯಂ ಸೇವಕ ಎಂದು ಹೇಳಿ ಆರೆಸ್ಸೆಸ್ ಬಗ್ಗೆ ಅನುಕಂಪ ತೋರುತ್ತಿದ್ದಾರೆ' ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿವಾದ ಸಂಬಂಧ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿರುವ ಶಾಸಕ ಎಚ್.ಡಿ.ತಮ್ಮಯ್ಯ, 'ಕಾಂಗ್ರೆಸ್ ಶಾಸಕನಾಗಿದ್ದರೂ ಸಂಘದ ಸ್ವಯಂ ಸೇವಕ ಎಂದು ಹೇಳಿರುವುದು ನಿಜ. ನಾನು ಜಾತ್ಯತೀತ ಹಿಂದುತ್ವದ ಮೇಲೆ ನಂಬಿಕೆ ಇಟ್ಟವನು. ಹಿಂದುತ್ವ ಕೇವಲ ಯಾವುದೇ ಒಂದು ಪಕ್ಷದ ಸ್ವತ್ತಲ್ಲ. ಕಾಂಗ್ರೆಸ್‍ನ ಬಹುತೇಕ ನಾಯಕರು ಹಿಂದುಗಳೇ, ಹಿಂದುತ್ವದ ಬಗ್ಗೆ ಬಿಜೆಪಿಯವರೇ ಮಾತನಾಡಬೇಕಾ?, ಕಾಂಗ್ರೆಸ್‍ನವರು ಮಾತನಾಡಬಾರದ? ನಾನು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಹಿಂದೂ' ಎಂದು ಸ್ಪಷ್ಟಪಡಿಸಿದರು.
'ಹಿಂದೆ ಆರೆಸ್ಸಸ್ ನಲ್ಲಿದ್ದವರು ನಂತರ ಅದನ್ನು ತೊರೆದು ಕಾಂಗ್ರೆಸ್ ಸೇರಿದವರೂ ಇದ್ದಾರೆ. ಅವರೆಲ್ಲ ಕಾಂಗ್ರೆಸ್ ಪಕ್ಷದ ಜಾತ್ಯತೀತ ನಾಯಕರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಕೂಡ ಆರೆಸ್ಸಸ್ ನಲ್ಲಿದ್ದರು. ಈಗ ಅದನ್ನು ತೊರೆದು ಪಕ್ಷದ ಜಾತ್ಯತೀತ ನಾಯಕರಾಗಿದ್ದಾರೆ. ಆರೆಸ್ಸಸ್ ನ ಶಿಸ್ತು ಅವರಲ್ಲಿ ಇನ್ನೂ ಇದೆ. ಹಾಗೆಂದ ಮಾತ್ರಕ್ಕೆ ಅವರನ್ನು ಆರೆಸ್ಸಸ್ ಕಾರ್ಯಕರ್ತ ಎನ್ನಲು ಸಾಧ್ಯವಿಲ್ಲ. ಇದೇ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ವಿವಾದ ಸೃಷ್ಟಿಸುವವರಿಗೆ ತಕ್ಕ ಉತ್ತರ ನೀಡುತ್ತೇನೆ' ಎಂದು ಪ್ರತಿಕ್ರಿಯಿಸಿದರು.