ಕನ್ನಡಿಗರೆಲ್ಲರೂ 'ಡೇರ್ಡೆವಿಲ್ ಮುಸ್ತಫಾ' ಚಿತ್ರ ನೋಡಿ, ಇದರಿಂದ ನಮಗೆ ಸೌಹಾರ್ದ ಪಾಠ ಇದೆ: ಪ್ರತಾಪ್ ಸಿಂಹ

ಮೈಸೂರು: 'ನಮ್ಮ ಮೈಸೂರು ಹುಡುಗರು ಮಾಡಿರುವ ‘ಡೇರ್ಡೆವಿಲ್ ಮುಸ್ತಫಾ; ಸಿನೆಮಾವನ್ನು ದಯವಿಟ್ಟು ಎಲ್ಲ ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ನೋಡಬೇಕು. ಇದು ಅದ್ಭುತವಾದ ಸಿನೆಮಾ, ಇದರಲ್ಲಿ ನಮಗೆ ಸೌಹಾರ್ದಯುತವಾಗಿ ನಾವು ಹೇಗೆ ಬದುಕಬೇಕೆಂಬ ಪಾಠ ಇದೆ' ಎಂದು ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಶನಿವಾರ ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಅವರ ಜೊತೆ ಚಿತ್ರಮಂದಿರಕ್ಕೆ ತೆರಳಿ 'ಡೇರ್ಡೆವಿಲ್ ಮುಸ್ತಫಾ' ಸಿನೆಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 'ಈ ಸಿನೆಮಾದಲ್ಲಿ ಯಾವುದೇ ಪೂರ್ವಾಗ್ರಹಗಳು ಇಲ್ಲ. ಧನಂಜಯ್ ಅವರು ಈ ಚಿತ್ರವನ್ನು ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಕನ್ನಡ ಚಿತ್ರರಂಗದ ಎಲ್ಲ ನಟರು ಇದನ್ನು ಅನುಸರಿಸಬೇಕು. ನಮ್ಮ ಮೈಸೂರು ಹುಡುಗರಿಗೆ ಈ ರೀತಿಯ ಸಿನೆಮಾಗಳನ್ನು ಇನ್ನಷ್ಟು ಮಾಡಲು ತಾಯಿ ಚಾಮುಂಡೇಶ್ವರಿ ಶಕ್ತಿ ನೀಡಲಿ' ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.
'ನಿರ್ಮಾಪಕ ಡಾಲಿ ಧನಂಜಯ್ ಅವರು ತಾನು ಬೆಳೆಯುವ ಹಂತದಲ್ಲೇ ಹೊಸ ಹುಡುಗರನ್ನು ಬೆಳೆಸುವಂತಹ ಕೆಲಸ ಮಾಡುತ್ತಿದ್ದಾರೆ. ಹೊಸಬರನ್ನು ಬೆಳೆಸುವಂತಹ ಹೃದಯವಂತಿಕೆ ಬೇರೆ ಎಲ್ಲರಿಗೂ ಬರಬೇಕು. ಅದಕ್ಕೆ ಧನಂಜಯ್ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಒಳ್ಳೆಯ ಮನಸ್ಸಿನಿಂದ ಹೇಳುತ್ತೇನೆ' ಎಂದು ಹೇಳಿದ್ದಾರೆ.
ನಮ್ಮ ಮೈಸೂರಿನ ಯುವಕರ ತಂಡ ಮಾಡಿರುವ "ಡೇರ್ಡೆವಿಲ್ ಮುಸ್ತಫಾ" ಸಿನಿಮಾ ಅದ್ಭುತವಾಗಿದೆ. ಮರೆಯದೆ ನೋಡಿ. ಚಿತ್ರಕ್ಕೆ ಬೆಂಗಾವಲಾಗಿ ನಿಂತಿರುವ ಡಾಲಿ ಧನಂಜಯ್ ಅವರಿಗೆ ಧನ್ಯವಾದಗಳು. @daali_pictures pic.twitter.com/cm8Y7eCIDe
— Pratap Simha (@mepratap) May 27, 2023