ಇನ್ನೂ ಖಾತೆ ಹಂಚಿಕೆಯಾಗಿಲ್ಲ, ವೈರಲ್ ಆಗುತ್ತಿರುವುದು ನಕಲಿ ಪಟ್ಟಿ: ಕಾಂಗ್ರೆಸ್ ಸ್ಪಷ್ಟನೆ

ಬೆಂಗಳೂರು, ಮೇ 27: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದು ನಕಲಿ ಪಟ್ಟಿಯಾಗಿದೆ.
ಶನಿವಾರ ರಾಜಭವನದಲ್ಲಿ 24 ಮಂದಿ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಅನೌಪಚಾರಿಕ ಸಂಪುಟ ಸಭೆ ನಡೆಸಿದರು. ಇದೇ ವೇಳೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ನಕಲಿ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.
ಇದನ್ನು ಗಮನಿಸಿದ ಕಾಂಗ್ರೆಸ್ ಪಕ್ಷವು, ‘ಇನ್ನೂ ಯಾವುದೇ ಸಚಿವರಿಗೆ ಖಾತೆ ಹಂಚಿಕೆಯಾಗಿರುವುದಿಲ್ಲ, ಯಾರೂ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ. ಸರಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ’ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ.
— Karnataka Congress (@INCKarnataka) May 27, 2023
ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ, ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ.
ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.