ರಕ್ಬರ್ ಖಾನ್ ಹತ್ಯೆ ಪ್ರಕರಣ: ಇಂತಹ ಘಟನೆಗಳು ಸಂವಿಧಾನದ ಆತ್ಮದ ಮೇಲಿನ ದಾಳಿಗಳು ಎಂದ ನ್ಯಾಯಾಲಯ
ಹೊಸದಿಲ್ಲಿ: ರಾಜಸ್ಥಾನದ ಆಳ್ವಾರ್ ನಲ್ಲಿ 2018ರಲ್ಲಿ ಗೋರಕ್ಷಕರಿಂದ ರಕ್ಬರ್ ಖಾನ್ ಹತ್ಯೆ ಪ್ರಕರಣದ ತನ್ನ ತೀರ್ಪಿನಲ್ಲಿ ಸ್ಥಳೀಯ ವಿಚಾರಣಾ ನ್ಯಾಯಾಲಯವು, ಯಾವುದೇ ಧರ್ಮವು ತನ್ನ ಹೆಸರಿನಲ್ಲಿ ಹಿಂಸೆ ಹಾಗೂ ದ್ವೇಷವನ್ನು ಅನುಮತಿಸುವುದಿಲ್ಲ ಮತ್ತು ಜಾತ್ಯತೀತ ದೇಶದಲ್ಲಿ ಇಂತಹ ಘಟನೆಗಳು ಭಾರತೀಯ ಸಂವಿಧಾನದ ದಾಳಿ ಮಾಡುತ್ತವೆ ಎಂದು ಹೇಳಿದೆ.
2018,ಜು.20 ರಂದು ರಾತ್ರಿ ಗೋ ಕಳ್ಳಸಾಗಾಣಿಕೆಯ ಶಂಕೆಯಲ್ಲಿ ಆಲ್ವಾರ್ ನ ಲಾಲ್ವಂಡಿಯಲ್ಲಿ ಗುಂಪಿನಿಂದ ತೀವ್ರ ದಾಳಿಗೆ ಗುರಿಯಾಗಿದ್ದ ಖಾನ್ ರನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ವಿಳಂಬಿಸಿದ್ದಕ್ಕಾಗಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಮೋಹನ ಸಿಂಗ್ ವಿರುದ್ಧ ಇಲಾಖಾ ವಿಚಾರಣೆಗೂ ನ್ಯಾಯಾಲಯವು ಶಿಫಾರಸು ಮಾಡಿದೆ.
ಗುರುವಾರ ಪ್ರಕರಣದಲ್ಲಿಯ ನಾಲ್ವರು ಆರೋಪಿಗಳಿಗೆ ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುನಿಲ ಕುಮಾರ ಗೋಯಲ್ ಅವರು, ಸ್ಥಳೀಯ ವಿಹಿಂಪ ನಾಯಕ ನವಲ್ ಕಿಶೋರರನ್ನು ಖುಲಾಸೆಗೊಳಿಸಿದ್ದಾರೆ.
‘ಧರ್ಮದ ನೆಪದಲ್ಲಿ ಆರೋಪಿಗಳು ಕಾನೂನನ್ನು ತಮ್ಮ ಕೈಗೆತ್ತಿಕೊಂಡಿದ್ದರು ಮತ್ತು ಗೋ ಕಳ್ಳಸಾಗಾಣಿಕೆದಾರರ ವಿರುದ್ಧ ಕ್ರಮಕ್ಕೆ ಯತ್ನಿಸಿದ್ದರು. ಧಾರ್ಮಿಕ ಹಿಂಸೆ ಅಥವಾ ದ್ವೇಷದ ಹರಡುವಿಕೆಗೆ ಯಾವುದೇ ಧರ್ಮವು ಅನುಮತಿಸುವುದಿಲ್ಲ. ಭಾರತದಂತಹ ಜಾತ್ಯತೀತ ದೇಶದಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳು ಭಾರತೀಯ ಸಂವಿಧಾನದ ಆತ್ಮಕ್ಕೆ ತೀವ್ರ ಹಾನಿ ಅಥವಾ ನೋವನ್ನುಂಟು ಮಾಡುತ್ತವೆ. ಸಮಾಜದ ಮೇಲೆ ವ್ಯಾಪಕ ಪರಿಣಾವನ್ನು ಬೀರುವ ಇಂತಹ ಪ್ರಕರಣಗಳಲ್ಲಿ ಮೃದು ನಿಲುವು ತಳೆದರೆ ಅದು ಸಮಾಜಕ್ಕೆ ನಕಾರಾತ್ಮಕ ಸಂದೇಶವನ್ನು ರವಾನಿಸಬಹುದಾದ ಬಲವಾದ ಸಾಧ್ಯತೆಯಿದೆ’ ಎಂದು ತನ್ನ ಆದೇಶದಲ್ಲಿ ಹೇಳಿರುವ ನ್ಯಾ.ಗೋಯಲ್, ಗೋವುಗಳನ್ನು ವಧೆಗಾಗಿಯೇ ಸಾಗಿಸಲಾಗುತ್ತಿದ್ದರೂ ಆರೋಪಿಗಳಿಗೆ ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವ ಮತ್ತು ಯಾರ ಮೇಲಾದರೂ ಹಲ್ಲೆ ನಡೆಸುವ ಹಕ್ಕು ಇರಲಿಲ್ಲ ಎಂದು ತಿಳಿಸಿದ್ದಾರೆ.
ತನ್ನ ಆದೇಶದಲ್ಲಿ ಎಎಸ್ಐ ಮೋಹನ ಸಿಂಗ್ ರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ನ್ಯಾಯಾಲಯವು, ಅವರು ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ ಹಾಗೂ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುವುದು ಮುಖ್ಯವಾಗಿದೆ ಎಂದು ಹೇಳಿದೆ.
ಆದಾಗ್ಯೂ, ಖಾನ್ ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದರೆ ಅವರ ಜೀವ ಖಂಡಿತ ಉಳಿಯುತ್ತಿತ್ತು ಎಂದು ಹೇಳುವುದು ಸಾಧ್ಯವಿಲ್ಲ ಎಂದು ತನ್ನ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯವು, ಆದರೆ ಖಾನ್ ರನ್ನು ಉಳಿಸಲು ಮತ್ತು ಆತನಿಗೆ ಚಿಕಿತ್ಸೆ ಒದಗಿಸಲು ಸಿಂಗ್ ಪ್ರಯತ್ನಿಸಬೇಕಿತ್ತು ಎಂದು ಹೇಳಿದೆ.
ಘಟನೆಯ ಕುರಿತು ನಸುಕಿನ 12:41ಕ್ಕೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು ಮತ್ತು ಅವರು 1:30ಕ್ಕೆ ಸ್ಥಳವನ್ನು ತಲುಪಿದ್ದರು. ಆದರೆ ಖಾನ್ ರನ್ನು ಆಸ್ಪತ್ರೆಗೆ ಕರೆದೊಯ್ದಾಗ ನಸುಕಿನ 3:55 ಗಂಟೆಯಾಗಿತ್ತು. ಘಟನಾ ಸ್ಥಳದಿಂದ ಕೇವಲ ನಾಲ್ಕು ಕಿ.ಮೀ.ಅಂತರದಲ್ಲಿ ಆಸ್ಪತ್ರೆಯಿದ್ದರೂ ಈ ವಿಳಂಬ ನಡೆದಿತ್ತು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಬೆಟ್ಟು ಮಾಡಿದೆ.