ಪ್ರವೀಣ್ ಪತ್ನಿಗೆ ನಾವೇ ಉದ್ಯೋಗ ನೀಡುತ್ತೇವೆ: ಪ್ರತಿಭಾ ಕುಳಾಯಿ
"ಬಿಜೆಪಿಯವರು ಗುತ್ತಿಗೆಯಾಧಾರದಲ್ಲಿ ಕೆಲಸ ಕೊಟ್ಟು, ಪ್ರಚಾರ ಪಡೆದಿದ್ದಾರೆ"

ಮಂಗಳೂರು: ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಬೇಡ. ಆಕೆಗೆ ಪೂರ್ಣಾವಧಿ ಉದ್ಯೋಗ ಸರಕಾರದಿಂದ ದೊರಕಿಸಿಕೊಡಲು ತಾವು ಶ್ರಮಿಸುವುದಾಗಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಹಿಂದಿನ ಬಿಜೆಪಿ ಸರಕಾರ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಕೆಲಸ ನೀಡಿತ್ತು. ಹೊಸ ಸರಕಾರ ಬಂದ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದಾಗಿದೆ. ಹೀಗಾಗಿ ಅವರು ಕೆಲಸ ಕಳೆದುಕೊಂಡಿದ್ದಾರೆ. ನಳಿನ್ ಕುಮಾರ್ ಸಂಸದರಾಗಿದ್ದರೂ ನೂತನ ಕುಮಾರಿಗೆ ಪೂರ್ಣಾವಧಿ ಉದ್ಯೋಗ ತೆಗೆಸಿಕೊಡಲು ಸಾಧ್ಯವಾಗಿಲ್ಲ ಎಂಬ ವಿಚಾರವನ್ನು ಗಮನಿಸಿದಾಗ ಅವರ ಸಾಮರ್ಥ್ಯ ಏನೆಂಬುದು ಗೊತ್ತಾಗುತ್ತದೆ. ಕೇಂದ್ರ ಸರಕಾರದ ಸಂಸ್ಥೆಗಳು ಇವೆ ಅದರಲ್ಲಿ ನಳಿನ್ ಕುಮಾರ್ ಕಟೀಲ್ ಉದ್ಯೋಗ ನೀಡಲಿ ಎಂದು ಪ್ರತಿಭಾ ಕುಳಾಯಿ ಹೇಳಿದರು.
ಪ್ರವೀಣ್ ನೆಟ್ಟಾರು ಬಿಲ್ಲವ ಸಮುದಾಯದವರು. ಅವರ ಪತ್ನಿಗೆ ಉದ್ಯೋಗ ದೊರಕಿಸಿಕೊಡುವ ಜವಾಬ್ದಾರಿ ನಮ್ಮ ಸಮುದಾಯಕ್ಕಿದೆ. ನಾನೇ ಅವರಿಗೆ ಉದ್ಯೋಗ ನೀಡುತ್ತೇನೆ ಎಂದು ಪ್ರತಿಭಾ ತಿಳಿಸಿದರು.