‘ವಿದ್ಯುತ್ ಗ್ಯಾರಂಟಿ ಯೋಜನೆ’ ಬಡವರಿಗೆ ಮಾತ್ರ ಕೊಡಿ: ಡಿಸಿಎಂಗೆ ನಿವೃತ್ತ ಐಎಎಸ್ ಅಧಿಕಾರಿ ಪತ್ರ

ಬೆಂಗಳೂರು, ಮೇ 27: ಕಾಂಗ್ರೆಸ್ ಪಕ್ಷವು ನೀಡಿದ್ದ ಐದು ಗ್ಯಾರೆಂಟಿ ಯೋಜನೆಗಳ ಪೈಕಿ 200 ಯೂನಿಟ್ ವಿದ್ಯುತ್ ಯೋಜನೆಯನ್ನು ಅರ್ಹ ಬಡವರಿಗೆ ನೀಡಬೇಕು. ನನ್ನಂತಹ ತೆರಿಗೆ ಪಾವತಿ ಮಾಡುವ ಮತ್ತು ಅನುಕೂಲವಾಗಿರುವವರಿಗೆ ಈ ಸೌಲಭ್ಯದ ಅವಶ್ಯಕತೆ ಇರುವುದಿಲ್ಲ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಯಣ ತಿಳಿಸಿದ್ದಾರೆ.
ಶನಿವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರವನ್ನು ಬರೆದಿರುವ ಅವರು, ಸರಕಾರವು ಕೈಗೊಳ್ಳುವ ಕೆಲವು ನಿರ್ಧಾರಗಳು ಬಡವರ, ಅಶಕ್ತರ ಪರವಾಗಿ ಇರಬೇಕೆಂದು ನನ್ನ ಆಶಯವಾಗಿದೆ. ಒಬ್ಬ ಆದಾಯ ತರಿಗೆ ಪಾವತಿದಾರನಾಗಿ ನನಗೆ ಚೈತನ್ಯವಿದ್ದರೂ, ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ಪಡೆದುಕೊಳ್ಳಲು ನನಗೆ ಮನಸಿಲ್ಲವಾಗಿದೆ. ಆದುದರಿಂದ ನಾನು ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ಬಳಸಿಕೊಳ್ಳಲು ಇಚ್ಚಿಸುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಮತ್ತು ಇತರೆ ಒಂದನೇ ಶ್ರೇಣಿ ಮತ್ತು ಎರಡನೇ ಶ್ರೇಣಿಯ ಅಧಿಕಾರಿಗಳು ಉಚಿತ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಬಿಟ್ಟು ಕೊಡುವ ಮೂಲಕ ತಮ್ಮ ಪ್ರಭುದ್ದತೆಯನ್ನು ಮರೆಯಬೇಕು. ಇದಲ್ಲದೆ ಲಕ್ಷಾಂತರ ಐಟಿ ಮತ್ತು ಬಿಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರೂ, ಇದೇ ಮಾರ್ಗವನ್ನು ಅನುಸರಿಸಿ, ಮಾದರಿ, ಪ್ರಜೆಗಳಾಗಬೇಕು ಎಂದು ಕೆ. ಅಮರನಾರಯಣ ತಿಳಿಸಿದ್ದಾರೆ.