ಮಲ್ಪೆ ಬೀಚ್: ಸಮುದ್ರದಲ್ಲಿ ಮುಳುಗಿದ ಪ್ರವಾಸಿಗ ಗಂಭೀರ
ಉಡುಪಿ, ಮೇ 27: ಮಲ್ಪೆ ಬೀಚ್‌ನ ಸಮುದ್ರದಲ್ಲಿ ಆಡುತ್ತಿದ್ದ ಯುವಕನೋರ್ವ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿ ರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ತೀವ್ರವಾಗಿ ಅಸ್ವಸ್ಥಗೊಂಡ ಬೆಂಗಳೂರಿನ ಸಚಿನ್ (25) ಎಂಬವರು ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ನಾಲ್ವರು ಬೆಂಗಳೂರಿನಿಂದ ಉಡುಪಿಗೆ ಮೇ 26ಕ್ಕೆ ಬಂದಿದ್ದು, ಇಂದು ಬೆಳಗ್ಗೆ ಆರು ಮಂದಿ ಮಲ್ಪೆ ಬೀಚ್‌ನ ಸಮುದ್ರದಲ್ಲಿ ಆಡುತ್ತಿದ್ದರು. ಈ ವೇಳೆ ಸಚಿನ್ ಅಲೆ ಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಹುಡುಕಾಟ ನಡೆಸಿದರೂ ಸಚಿನ್ ಪತ್ತೆಯಾಗಿರಲಿಲ್ಲ. ಸುಮಾರು 30 ಗಂಟೆಗಳ ಬಳಿಕ ನೀರಿನಿಂದ ಮೇಲೆ ಬಂದ ಸಚಿನ್ ಅವರನ್ನು ಮೇಲಕ್ಕೆ ಎತ್ತಿ ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.
ಸಮುದ್ರಕ್ಕೆ ಇಳಿಯುವುದನ್ನು ನಿಷೇಧಿಸಿ
ಮಲ್ಪೆ ಬೀಚಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಸಾಕಷ್ಟು ಅಧಿಕವಾಗಿರುತ್ತದೆ. ಇದೀಗ ಹವಾಮಾನದಲ್ಲಿ ಏರುಪೇರು ಆಗುತ್ತಿರುವುದರಿಂದ ಸಮುದ್ರದ ಅಲೆಗಳ ಸೆಳೆತ ಮತ್ತು ಅಬ್ಬರ ಕೂಡ ಜಾಸ್ತಿಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ನೀರಿನಲ್ಲಿ ಮುಳುಗಿ ಅಪಾಯ ತಂದೊಡ್ಡುತ್ತಿರುವ ಘಟನೆಗಳು ಕೂಡ ಮಲ್ಪೆ ಬೀಚ್‌ನಲ್ಲಿ ನಡೆಯು ತ್ತಿದೆ. ಆದುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಪ್ರವಾಸಿ ಗರು ನೀರಿಗೆ ಇಳಿಯುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಜೀವ ರಕ್ಷಕ ಈಶ್ವರ್ ಮಲ್ಪೆ ಒತ್ತಾಯಿಸಿದ್ದಾರೆ.
ಬೀಚ್‌ನಲ್ಲಿ ಒಂದು ವಾರದಲ್ಲಿ ಇಬ್ಬರು ಪ್ರವಾಸಿಗರು ನೀರಿನಲ್ಲಿ ಮುಳುಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರು ಸ್ಥಳೀಯರ, ಜೀವರಕ್ಷಕರ, ಪೊಲೀಸರ ಹಾಗೂ ಕರಾವಳಿ ಕಾವಲು ಪೊಲೀಸರ ಮಾತುಗಳನ್ನು ಕೇಳುತ್ತಿಲ್ಲ. ಅವರ ಮಾತನ್ನು ಧಿಕ್ಕರಿಸಿ ನೀರಿಗೆ ಇಳಿಯುತ್ತಿದ್ದಾರೆ. ಆದುದರಿಂದ ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ.