ಮಣಿಪಾಲ: ಪೊಲೀಸರ ಹೆಸರಿನಲ್ಲಿ ಜೋಡಿಯಿಂದ ಹಣ ಸುಲಿಗೆ; ಇಬ್ಬರ ಬಂಧನ
ಮಣಿಪಾಲ, ಮೇ 27: ಪೊಲೀಸರ ಹೆಸರಿನಲ್ಲಿ ಜೋಡಿಯಿಂದ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ಹನುಮಂತಪ್ಪ ಮಹಾದೇವಪ್ಪ ಹಾಗೂ ಮುರ್ಡೇಶ್ವರದ ಲಕ್ಷ್ಮಣ ಕುಪ್ಪಗೊಂಡ ಬಂಧಿತ ಆರೋಪಿಗಳು.
ಶಿರ್ವ ಬಂಟಕಲ್ಲಿನ ಮಂಜುನಾಥ ಎಂಬವರು ತನ್ನ ಗೆಳತಿ ಜೊತೆ ಮಣಿಪಾಲದ ಬಡಗಬೆಟ್ಟು ಎಂಬಲ್ಲಿರುವ ಅರ್ಬಿ ಪಾಲ್ಸ್ ಎಂಬಲ್ಲಿ ಕುಳಿತು ಮಾತನಾಡುತಿದ್ದರು. ಈ ವೇಳೆ ಅಲ್ಲಿಗೆ ಬಂದ ಹನುಮಂತಪ್ಪ, ನಾನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್, ನೀವು ಯಾಕೆ ಕುಳಿತ್ತಿದ್ದೀರಿ ಎಂದು ಪ್ರಶ್ನಿಸಿದನು. ನಿಮ್ಮ ಮೇಲೆ ಕೇಸು ಮಾಡುತ್ತೇನೆ ಎಂದು ಬೆದರಿಸಿದ ಆತ, ಮಣಿಪಾಲ ಎಸ್ಸೈ ಹೇಳಿದರೆ ಬಿಡುತ್ತೇನೆ ಎಂದು ಹೇಳಿದನು. ಬಳಿಕ ಎಸ್ಸೈ ಎಂದು ಹೇಳಿಕೊಂಡು ಲಕ್ಷ್ಮಣ ಕುಪ್ಪಗೊಂಡನಿಗೆ ಕರೆ ಮಾಡಿದ ಹನುಮಂತಪ್ಪ, ಲೌಡ್ ಸ್ವೀಕರ್‌ನಲ್ಲಿಟ್ಟು ಮಾತನಾಡಿಸಿದನು.
ಲಕ್ಷ್ಮಣ್ ಫೋನ್ ಕರೆಯಲ್ಲಿ ಮಾತನಾಡಿ, ಐದು ಸಾವಿರ ರೂ. ಕೊಟ್ಟರೆ ಬಿಡುತ್ತೇನೆ, ಇಲ್ಲದಿದ್ದರೆ ಜೀಪು ಕಳುಹಿಸಿ ಠಾಣೆಗೆ ಕರೆಸಿಕೊಳ್ಳುತ್ತೇನೆ ಎಂದು ಬೆದರಿಸಿದನು. ಬಳಿಕ ಮಂಜುನಾಥ್ ಅವರ ಗೂಗಲ್ ಪೇಯಿಂದ ಬಲತ್ಕಾರ ವಾಗಿ ಹನುಮಂತಪ್ಪನ ಮೊಬೈಲ್ ಸಂಖ್ಯೆಗೆ 5ಸಾವಿರ ರೂ. ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.