ಸ್ಕೂಟರ್ ಪಲ್ಟಿ: ತಂದೆ ಮೃತ್ಯು, ಮಗನಿಗೆ ಗಾಯ

ಕಾರ್ಕಳ, ಮೇ 27: ಪ್ರಾಣಿಯೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಪರಿಣಾಮ ತಂದೆ ಮೃತಪಟ್ಟು ಮಗ ಗಾಯಗೊಂಡ ಘಟನೆ ಮೇ 26ರಂದು ರಾತ್ರಿ 10.30ರ ಸುಮಾರಿಗೆ ಹಿರ್ಗಾನ ಗ್ರಾಮದ ಬಿ ಎಂ ಶಾಲೆಯ ಬಳಿ ನಡೆದಿದೆ.
ಮೃತರನ್ನು ನಿಟ್ಟೆ ಗ್ರಾಮದ ಕಲ್ಯಾ ನಿವಾಸಿ ಸದಾನಂದ ಶೆಟ್ಟಿ(45) ಎಂದು ಗುರುತಿಸಲಾಗಿದೆ. ಇವರ ಮಗ ಸ್ಪರ್ಷ್(13) ಎಂಬವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಕ್ಯಾಟರಿಂಗ್ ವ್ಯವಹಾರ ಮಾಡಿಕೊಂಡಿದ್ದ ಸದಾನಂದ ಶೆಟ್ಟಿ, ಶಿರ್ಲಾಲ್ ಎಂಬಲ್ಲಿ ಸಂಬಂಧಿಕ ಮನೆಯ ಕಾರ್ಯಕ್ರಮ ಮುಗಿಸಿ ಮನೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಈ ವೇಳೆ ಪ್ರಾಣಿಯೊಂದು ರಸ್ತೆಯಲ್ಲಿ ಅಡ್ಡ ಬಂದ ಕಾರಣ ಸದಾನಂದ ಶೆಟ್ಟಿ ಒಮ್ಮೆಲೇ ಬ್ರೇಕ್ ಹಾಕಿದರು.
ಇದರ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸದಾನಂದ ಶೆಟ್ಟಿ ಮತ್ತು ಸ್ಪರ್ಷ್ ರಸ್ತೆಗೆ ಬಿದ್ದು ಗಾಯಗೊಂಡರು. ಗಂಭೀರವಾಗಿ ಗಾಯಗೊಂಡಿದ್ದ ಸದಾನಂದ ಶೆಟ್ಟಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.