ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಕಾಡಿದರೆ ಪ್ರಶಸ್ತಿ ವಿಜೇತ ತಂಡವನ್ನು ಆಯ್ಕೆ ಮಾಡುವುದು ಹೇಗೆ?
ಅಹಮದಾಬಾದ್, ಮೇ 27: ಎರಡು ತಿಂಗಳ ಕಾಲ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯು ರವಿವಾರ ತೆರೆ ಕಾಣಲಿದೆ. ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿವೆ.
ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದ ಆರಂಭಕ್ಕೂ ಮೊದಲು ಮಳೆಯಾಗಿದ್ದು ಪಂದ್ಯವು 30 ನಿಮಿಷ ವಿಳಂಬವಾಗಿ ಆರಂಭವಾಗಿತ್ತು. ಇದೇ ರೀತಿಯ ವಾತಾವರಣ ಮುಂದುವರಿದರೆ ಫೈನಲ್ ಪಂದ್ಯದ ಮೇಲೆ ಪರಿಣಾಮಬೀರಬಹುದು. ಫೈನಲ್ ಪಂದ್ಯದಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಭಾರೀ ಮಳೆ ಭೀತಿ ಇಲ್ಲ ಎಂದು ತಿಳಿದುಬಂದಿದೆ.
ಒಂದು ವೇಳೆ ಫೈನಲ್ ಪಂದ್ಯಕ್ಕೆ ಮಳೆ ಕಾಟ ನೀಡಿದರೆ ಓವರ್‌ಗಳ ಸಂಖ್ಯೆ ಕಡಿಮೆ ಮಾಡದೆಯೇ ರಾತ್ರಿ 10ರ ತನಕ ಕಾದು ಪಂದ್ಯ ಆರಂಭಿಸಬಹುದು. ನಂತರವೂ ಮಳೆ ಬಂದರೆ ತಲಾ 5 ಓವರ್‌ಗಳ ಪಂದ್ಯ ನಡೆಯಬಹುದು. ಫೈನಲ್ ಪಂದ್ಯ ಆರಂಭಗೊಂಡರೆ(ಕನಿಷ್ಠ ಒಂದು ಎಸೆತ ಎಸೆದರೂ)ಅದು ನಿಗದಿತ ದಿನದಂದು ಪೂರ್ಣಗೊಳ್ಳದಿದ್ದರೆ,ಅದು ಮೀಸಲು ದಿನದಂದು ಪೂರ್ಣಗೊಳ್ಳುತ್ತದೆ. ಹಿಂದಿನ ದಿನ ನಿಲ್ಲಿಸಿದ ಹಂತದಿಂದ ಪುನರಾರಂಭವಾಗುತ್ತದೆ.
ಒಂದು ವೇಳೆ ಮೀಸಲು ದಿನದಂದು ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ 5 ಓವರ್‌ಗಳ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಸಂದರ್ಭದಲ್ಲಿ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಆಡಲಾಗುತ್ತದೆ. ಒಂದು ವೇಳೆ ಮೀಸಲು ದಿನದಂದೂ ಸೂಪರ್ ಓವರ್ ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದಾಗ ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.