ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಬಂಧನಕ್ಕೆ ರಾಮದೇವ್ ಆಗ್ರಹ
ಹೊಸದಿಲ್ಲಿ,ಮೇ 27: ಓರ್ವ ಬಾಲಕಿ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ ಶರಣ ಸಿಂಗ್ ಬಂಧನಕ್ಕೆ ಆಗ್ರಹಿಸಿ ಹಲವು ವಾರಗಳಿಂದ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ದೇಶದ ಅತ್ಯುನ್ನತ ಕುಸ್ತಿಪಟುಗಳನ್ನು ಯೋಗಗುರು ಬಾಬಾ ರಾಮದೇವ ಅವರು ಬೆಂಬಲಿಸಿದ್ದಾರೆ.
ಮೂರು ದಿನಗಳ ಯೋಗ ಶಿಬಿರಕ್ಕಾಗಿ ರಾಜಸ್ಥಾನದ ಭಿಲ್ವಾರಾದಲ್ಲಿರುವ ರಾಮದೇವ ಸುದ್ದಿಗಾರರೊಂದಿಗೆ ಮಾತನಾಡಿ,ಸಿಂಗ್ ಅವರನ್ನು ಕಂಬಿಗಳ ಹಿಂದೆ ತಳ್ಳಬೇಕು ಎಂದರು. ದೇಶದ ಕುಸ್ತಿಪಟುಗಳು ಜಂತರ್ ಮಂತರ್ ನಲ್ಲಿ ಧರಣಿ ಕುಳಿತಿರುವುದು ಮತ್ತು ಡಬ್ಲುಎಫ್ಐ ಅಧ್ಯಕ್ಷರ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪವನ್ನು ಹೊರಿಸಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಇಂತಹ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು ಮತ್ತು ಕಂಬಿಗಳ ಹಿಂದೆ ತಳ್ಳಬೇಕು. ಸಿಂಗ್ ಪ್ರತಿದಿನ ತಾಯಂದಿರು,ಸೋದರಿಯರು ಮತ್ತು ಪುತ್ರಿಯರ ಬಗ್ಗೆ ಅಸಂಬದ್ಧ ಮಾತುಗಳನ್ನಾಡುತ್ತಾರೆ. ಇದು ಅತ್ಯಂತ ಖಂಡನೀಯ ದುಷ್ಟ ಕೃತ್ಯ,ಪಾಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿಲ್ಲಿ ಪೊಲೀಸರು ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ ಬಳಿಕವೂ ಅವರನ್ನು ಬಂಧಿಸದಿರುವ ಕುರಿತು ಪ್ರಶ್ನಿಸಿದಾಗ ರಾಮದೇವ್,‘ನಾನು ಹೇಳಿಕೆಯನ್ನು ಮಾತ್ರ ನೀಡಬಲ್ಲೆ. ನಾನು ಅವರನ್ನು ಜೈಲಿಗೆ ತಳ್ಳಲು ಸಾಧ್ಯವಿಲ್ಲ ’ಎಂದು ಉತ್ತರಿಸಿದರು.
‘ನಾನು ಎಲ್ಲ ಪ್ರಶ್ನೆಗಳಿಗೆ ರಾಜಕೀಯವಾಗಿ ಉತ್ತರಿಸಲು ಸಮರ್ಥನಿದ್ದೇನೆ. ನಾನು ಬೌದ್ಧಿಕವಾಗಿ ದಿವಾಳಿಯಾಗಿಲ್ಲ. ನಾನು ಮಾನಸಿಕವಾಗಿ ಅಥವಾ ಬೌದ್ಧಿಕವಾಗಿ ಅಂಗವಿಕಲನಲ್ಲ. ದೇಶಕ್ಕಾಗಿ ನಾನು ದೂರದೃಷ್ಟಿ ಹೊಂದಿದ್ದೇನೆ ’ ಎಂದೂ ರಾಮದೇವ ಹೇಳಿದರು.