ರಾಜಸ್ಥಾನ: ಕಸ್ಟಡಿಯಲ್ಲಿ ಯುವಕ ಸಾವು; ಐವರು ಪೊಲೀಸ್ ಅಧಿಕಾರಿಗಳ ಅಮಾನತು
ಜೈಪುರ, ಮೇ 27: ಇಪ್ಪತ್ತೈದು ವರ್ಷದ ಯುವಕ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ಉದಯಪುರ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಅಧಿಕಾರಿಗಳಲ್ಲಿ ಗೋಂಗುಂಡಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಕೂಡ ಸೇರಿದ್ದಾರೆ. ನಿರ್ಲಕ್ಷ್ಯದ ಆರೋಪದ ಕಾರಣಕ್ಕೆ ಮತ್ತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಮೀಸಲು ಪೊಲೀಸ್ ಲೈನ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ವಿಕಾಸ್ ಶರ್ಮಾ ತಿಳಿಸಿದ್ದಾರೆ.
ಕಸ್ಟಡಿಯಲ್ಲಿ ಸಾವನ್ನಪ್ಪಿದ ಯುವಕನನ್ನು ದೇವ್ರೋ ಕೊ ಖೇರಿ ಗ್ರಾಮದ ನಿವಾಸಿ ಸುರೇಂದ್ರ ಸಿಂಗ್ ದೇವ್ರಾ ಎಂದು ಗುರುತಿಸಲಾಗಿದೆ. ದೇವ್ರಾ ಓರ್ವ ಯುವತಿಯೊಂದಿಗೆ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಬಳಿಕ ಯುವತಿಯ ಕುಟುಂಬ ದೇವ್ರಾ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿತ್ತು. ರಾಜಸ್ಥಾನದ ಪೊಲೀಸರ ತಂಡ ದೇವ್ರಾನನ್ನು ಗುಜರಾತ್‌ನಿಂದ ವಶಕ್ಕೆ ತೆಗೆದುಕೊಂಡಿತ್ತು. ಅನಂತರ ಗೋಗುಂಡಾ ಪೊಲೀಸ್ ಠಾಣೆಗೆ ಕರೆ ತಂದಿತ್ತು.
‘‘ಆತ (ದೇವ್ರಾ)ನನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿ ಇರಿಸಲಾಗಿತ್ತು. ಆತ ಇದ್ದಕ್ಕಿದ್ದಂತೆ ಮೂರ್ಛೆ ಕಳೆದುಕೊಂಡ. ಕೂಡಲೇ ಆತನನ್ನು ಎಂ.ಬಿ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ’’ ಎಂದು ವಿಕಾಸ್ ಶರ್ಮಾ ತಿಳಿಸಿದ್ದಾರೆ.
ಅನಂತರ ದೇವ್ರಾ ಅವರ ಸಂಬಂಧಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.