ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣ: ಯಾಸಿನ್ ಮಲಿಕ್‌ಗೆ ಮರಣ ದಂಡನೆ ವಿಧಿಸುವಂತೆ ಕೋರಿ ಎನ್‌ಐಎ ಅರ್ಜಿ

ಹೊಸದಿಲ್ಲಿ, ಮೇ 27: ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣ ದಂಡನೆ ವಿಧಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಹಾಗೂ ತಲ್ವಂತ್ ಸಿಂಗ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಲಿದೆ.
ಯಾಸಿನ್ ಮಲಿಕ್‌ಗೆ ವಿಶೇಷ ಎನ್‌ಐಎ ನ್ಯಾಯಾಲಯ ಕಳೆದ ವರ್ಷ ಮೇಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಪ್ರಕರಣದಲ್ಲಿ ಯಾಸಿನ್ ಮಲಿಕ್ ತಪ್ಪೊಪ್ಪಿಕೊಂಡಿದ್ದರು. ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿರಲಿಲ್ಲ. ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭ ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಈ ಪ್ರಕರಣ ಸರ್ವೋಚ್ಚ ನಕ್ ಅಪರೂಪದಲ್ಲಿ ಅಪರೂಪದ ಪ್ರಕರಣ ಅಲ್ಲ ಎಂದು ಅಭಿಪ್ರಾಯಿಸಿದ್ದರು.
ತಾನು ಗಾಂಧಿ ಅವರ ಅಹಿಂಸಾಚಾರದ ಮಾರ್ಗವನ್ನು ಅನುಸರಿಸುತ್ತಿದ್ದೆ. ಶಾಂತಿಯುತ ಹೋರಾಟ ನಡೆಸುತ್ತಿದ್ದೆ ಎಂಬ ಯಾಸಿನ್ ಮಲಿಕ್ ಅವರ ಪ್ರತಿಪಾದನೆಯನ್ನು ಪ್ರವೀಣ್ ಸಿಂಗ್ ಅವರು ತಿರಸ್ಕರಿಸಿದ್ದರು.