ಕಾರ್ಕಳ: ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ವಾರ್ಷಿಕೋತ್ಸವ ಸಮಾರಂಭ ಆಚರಣೆ
ಡಾ ಟಿ ಎಂ ಎ ಪೈ 125ನೇ ಜನ್ಮ ದಿನಾಚರಣೆ

ಕಾರ್ಕಳ: ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ವತಿಯಿಂದ ಡಾ ಟಿ ಎಂ ಎ ಪೈ ಅವರ 125ನೇ ಜನ್ಮ ದಿನಾಚರಣೆ ಹಾಗೂ ಆಸ್ಪತ್ರೆಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಹೆ ಮಣಿಪಾಲದ ಸಹ ಕುಲಪತಿಗಳಾದ ಡಾ ಶರತ್ ಕೆ ರಾವ್ ಅವರು, ಡಾ ಟಿ ಎಂ ಎ ಪೈ ಅವರಿಗೆ ‘ನನ್ನಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂದಿದ್ದ ದೂರದರ್ಶಿತ್ವದ ಕುರಿತು ನೆನಪಿಸಿದರು. ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಮುಂದೆ ಬರಬೇಕಾದರೇ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಆರ್ಥಿಕ ಸಹಾಯ ಅತೀ ಮುಖ್ಯ . ಅದರಂತೆ ಮಣಿಪಾಲದಂತಹ ಸಣ್ಣ ಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಬ್ಯಾಂಕ್ ಆರಂಭಿಸುವುದರ ಮೂಲಕ ಸಾವಿರಾರು ಜನರಿಗೆ ಉದ್ಯೋಗ ದೊರಕುವಂತೆ ಆಶ್ರಯದಾತರಾದರು. ಇಂದು ಈ ಸಂಸ್ಥೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲುತ್ತಿದೆ ಎಂದರು.
ಗೌರವ ಅತಿಥಿಗಳಾಗಿದ್ದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ ಶೆಟ್ಟಿ ಅವರು ಆಸ್ಪತ್ರೆಯ ಉದ್ಯೋಗಿಗಳಿಗೆ ಈ ವರ್ಷ ಆಯೋಜಿಸುತ್ತಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಯಾಲೆಂಡರ್ ‘ಪ್ರತಿಬಿಂಭ’ ಬಿಡುಗಡೆ ಮಾಡಿ, ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಬೆಳೆದುಬಂದ ರೀತಿ ಮತ್ತು ಇದಕ್ಕೆ ಸಹಕರಿಸಿದ ದಾನಿಗಳನ್ನು ಸ್ಮರಿಸಿದರು. ಕೆ ಎಂ ಸಿ ಡೀನ್ ಡಾ ಪದ್ಮರಾಜ್ ಹೆಗ್ಡೆ ಆಸ್ಪತ್ರೆಯ ವೆಬ್ ಸೈಟ್ ಬಿಡುಗಡೆಗೊಳಿಸಿ ಮಾತನಾಡಿ ಇನ್ನಷ್ಟು ಹೊಸ ಹೊಸ ಸೇವೆಗಳನ್ನು ಇಲ್ಲಿ ಆರಂಭಿಸಲಿದ್ದೇವೆ ಎಂದು ಹೇಳಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ, ಮೂಳೆ ಮತ್ತು ಕೀಲಿನ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ವಿಕಿರಣ ಶಾಸ್ತ್ರ ವಿಭಾಗ ಮತ್ತು ಪ್ಯಾಥೊಲಜಿ (ರೋಗ ಪತ್ತೆ ಶಾಸ್ತ್ರ) ವಿಭಾಗಗಳನ್ನು ಈ ವರ್ಷ ಹೊಸದಾಗಿ ಸೇರಿಸಲಾಗಿದೆ ಎಂದರು . ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞ ಡಾ ಸಂಜಯ್ ಕುಮಾರ್ ವಂದಿಸಿದರು. ಮಾಹೆ ಮಣಿಪಾಲ, ಕೆ ಎಂ ಸಿ ಮಣಿಪಾಲ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹಿರಿಯ ಅಧಿಕಾರಿಗಳು, ರೋಟರಿ ಕಾರ್ಕಳದ ದಾನಿಗಳು ಹಾಗೂ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಸಿಬ್ಬಂದಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.