ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ: ಬಿಜೆಪಿಯಿಂದ ತೀವ್ರ ವಿರೋಧ

ಹೊಸ ದಿಲ್ಲಿ: ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ಇದರ ಬೆನ್ನಿಗೇ #MyParliamentMyIndia ಎಂಬ ಹ್ಯಾಶ್ ಟ್ಯಾಗ್ ಬಳಸಿ, ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ ಟ್ವೀಟ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
ಶವಪೆಟ್ಟಿಗೆ ಹಾಗೂ ನೂತನ ಸಂಸತ್ ಭವನದ ಫೋಟೊಗಳನ್ನು ಹಾಕಿ, "ಏನಿದು?" ಎಂದು ಆರ್‌ಜೆಡಿ ಟ್ವೀಟ್ ಮಾಡಿದೆ. ಇದಕ್ಕೆ ಉದ್ರೇಕ ಹಾಗೂ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬಿಜೆಪಿ, "ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿರುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕಿದೆ" ಎಂದು ತೀಕ್ಷ್ಣವಾಗಿ ಹೇಳಿದೆ ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಇದು ತುಂಬಾ ದುರದೃಷ್ಟಕರ. ನೂತನ ಸಂಸತ್ ಭವನವನ್ನು ಅವರು ಶವಪೆಟ್ಟಿಗೆಗೆ ಹೋಲಿಸುತ್ತಿದ್ದಾರೆ. ಹಾಗಾದರೆ, ಹಳೆಯ ಸಂಸತ್ ಭವನವನ್ನು ಶೂನ್ಯಕ್ಕೆ ಹೋಲಿಸಬಹುದೆ? ನಾವು ಈ ಮುನ್ನ ಶೂನ್ಯದಲ್ಲಿ ಕುಳಿತಿದ್ದೆವೆ?" ಎಂದು ಸುಶೀಲ್ ಮೋದಿಯವರ ಸ್ವಪಕ್ಷೀಯ ಸಹೋದ್ಯೋಗಿ ದುಶ್ಯಂತ್ ಗೌತಮ್ ಪ್ರಶ್ನಿಸಿದ್ದಾರೆ.
"ಇಂದು ನೂತನ ಸಂಸತ್ ಭವನ ಉದ್ಘಾಟನೆಯಾಗುತ್ತಿರುವ ಹೊತ್ತಿನಲ್ಲಿ ಯಾರೂ ರಾಜಕೀಯ ಪ್ರೇರಿತ ಪ್ರತಿಕ್ರಿಯೆಗಳನ್ನು ನೀಡಬಾರದು. ಎಲ್ಲ ರಾಜಕೀಯ ಪಕ್ಷಗಳು ರಾಜಕೀಯವನ್ನು ಮೀರಬೇಕು ಹಾಗೂ ನೂತನ ಸಂಸತ್ ಭವನಕ್ಕೆ ಗೌರವ ನೀಡಬೇಕು" ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಕರೆ ನೀಡಿದ್ದಾರೆ.
ಇತರ ವಿರೋಧ ಪಕ್ಷಗಳು ಹಾಗೂ ನಾಯಕರೂ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಟೀಕಿಸಿದ್ದಾರೆ. ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಜನ್ಮದಿನದಂದು ನೂತನ ಸಂಸತ್ ಭವನವನ್ನು ಉದ್ಘಾಟಿಸುತ್ತಿರುವುದರತ್ತ ಕಾಂಗ್ರೆಸ್ ಬೊಟ್ಟು ಮಾಡಿದೆ.
ये क्या है? pic.twitter.com/9NF9iSqh4L
— Rashtriya Janata Dal (@RJDforIndia) May 28, 2023