ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ 2000 ರೂ.ನೋಟಿನ ಜಟಾಪಟಿ!

ಬೆಂಗಳೂರು, ಮೇ 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ(ಬಿಎಂಟಿಸಿ) ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಇದೀಗ 2000 ರೂ. ಮುಖಬೆಲೆಯ ನೋಟು ಸ್ವೀಕರಿಸಬೇಕೇ? ಅಥವಾ ಬೇಡವೇ? ಎಂಬ ಗೊಂದಲ ಸೃಷ್ಟಿಯಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಹೊಸಕೋಟೆ ಘಟಕ ಪ್ರಯಾಣಿಕರಿಂದ 2000 ರೂ.ಮುಖಬೆಲೆಯ ನೋಟುಗಳನ್ನು ಸ್ವೀಕರಿಸದಂತೆ ಆದೇಶ ಹೊರಡಿಸಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ ಸಂಸ್ಥೆ ಸ್ಪಷ್ಟಣೆ ನೀಡಿದ್ದು, ‘ಬಿಎಂಟಿಸಿ ಸಂಸ್ಥೆ ಅಂತಹ ಯಾವುದೇ ಆದೇಶ ನೀಡಿಲ್ಲ. ಆದರೆ, ಹೊಸಕೋಟೆ ಘಟಕದಿಂದ ಈ ರೀತಿಯ ತಪ್ಪಾದ ಆದೇಶ ಬಂದಿದ್ದು, ಅದನ್ನು ಹಿಂಪಡೆಯಲಾಗಿದೆ’ ಎಂದು ಹೇಳಿದೆ.
ಇದರ ಬೆನ್ನಲ್ಲೆ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್ಸಿನ ನಿರ್ವಾಹಕರು 2000 ರೂ. ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶವನ್ನು ಹೊರಡಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ. ‘ಪ್ರಯಾಣಿಕರಿಂದ 2000ರೂ.ಮುಖಬೆಲೆಯ ನೋಟುಗಳನ್ನು ಸ್ವೀಕರಿಸಬೇಕು’ ಎಂದು ಉಭಯ ಸಂಸ್ಥೆಗಳು ನಿರ್ವಾಹಕರಿಗೆ ನಿರ್ದೇಶನ ನೀಡಿವೆ.
ಆದರೆ, ಆರ್‍ಬಿಐ ಮೇ 19ರಂದು 2000ರೂ.ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಘೋಷಣೆ ಬಳಿಕ ಸಾರ್ವಜನಿಕರು ತಮ್ಮಲ್ಲಿರುವ 2 ಸಾವಿರ ರೂ.ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಯಮ ಮಾಡಿಕೊಳ್ಳಬೇಕಿದೆ. ಗರಿಷ್ಟ ಮೊತ್ತದ ನೋಟು ಆಗಿರುವ ಕಾರಣ ಚಿಲ್ಲರೆ ಸಮಸ್ಯೆ ಕಾರಣ ನಿರ್ವಾಹಕರು ಹಾಗೂ ಪ್ರಯಾಣಿಕರ ನಡುವೆ 2000 ರೂ.ಮುಖಬೆಲೆ ನೋಟು ಜಟಾಪಟಿಗೂ ಕಾರಣವಾಗಿದೆ.