ಯಶೋದಾ ಮೋಹನ್‌ಗೆ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ

ಉಡುಪಿ, ಮೇ 28: ಉಡುಪಿ ತುಳುಕೂಟ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ದೊಂದಿಗೆ 28ನೇ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ಸಾಹಿತಿ ಯಶೋದಾ ಮೋಹನ್ ಅವರಿಗೆ ರವಿವಾರ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತ ‘ದೇರಮಾಮುನ ದೂರನೋಟೊಲು’ ಕಾದಂಬರಿಯನ್ನು ಬಿಡುಗಡೆಗೊಳಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ತುಳುವಿಗೆ ರಾಜ್ಯಭಾಷೆಯ ಮಾನ್ಯತೆ ನೀಡುವ ನಿಟ್ಟಿನಲ್ಲಿ ಹಲವು ವರ್ಷ ಗಳಿಂದ ಹೋರಾಟಗಳು ನಡೆಯುತ್ತಿವೆ. ವಿಧಾನಸಭೆಯಲ್ಲಿ ತುಳುವಿನ ಪರವಾಗಿ ಮಾತನಾಡಿ ತುಳು ಜನತೆಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ಚಲನಚಿತ್ರ ನಟಿ ಹರಿಣಿ, ಉದ್ಯಮಿ ಯು.ವಿಶ್ವನಾಥ ಶೆಣೈ ಮುಖ್ಯ ಅತಿಥಿಗಳಾ ಗಿದ್ದರು. ಸಾಹಿತಿ ಯಶೋದಾ ಮೋಹನ್, ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಅಖಿಲ ಭಾರತ ತುಳು ಒಕ್ಕೂಟದ ಮಹಿಳಾ ಸಂಚಾಲಕಿ ವಿಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗಪಟು ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸ ಲಾಯಿತು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಪ್ರಶಸ್ತಿ ಪುರಸ್ಕೃತ ಕಾದಂಬರಿಯ ಪರಿಚಯ ಮಾಡಿದರು. ತುಳುಕೂಟದ ಕೋಶಾಧಿಕಾರಿ ಚೈತನ್ಯ ಎಂ.ಜಿ. ವಂದಿಸಿದರು. ಯಶೋಧಾ ಕೇಶವ ಕಾರ್ಯಕ್ರಮ ನಿರೂಪಿಸಿದರು.