ಅವಧಿ ಮೀರಿ ವಿಚಾರಣೆ ಕೈಗೊಳ್ಳುವುದು ನಿಯಮಬಾಹಿರ: ಹೈಕೋರ್ಟ್

ಬೆಂಗಳೂರು, ಮೇ 28: ಅಪರಾಧ ಕೃತ್ಯ ಅಸಂಜ್ಞೇಯ ಸ್ವರೂಪದ್ದಾಗಿದೆ. ಒಂದರಿಂದ ಮೂರು ವರ್ಷದವರೆಗೆ ಕಾರಾಗೃಹ ಶಿಕ್ಷೆ ನೀಡಬಹುದಾಗಿದ್ದರೆ ಮೂರು ವರ್ಷದೊಳಗೆ ವಿಚಾರಣೆ(ಕಾಗ್ನಿಜೆನ್ಸ್) ಕೈಗೆತ್ತಿಕೊಳ್ಳಬೇಕು, ಅವಧಿ ಮೀರಿದ ನಂತರ ವಿಚಾರಣಾ ನ್ಯಾಯಾಲಯಗಳು ವಿಚಾರಣೆಗೆ ಮುಂದಾಗುವುದು ಕಾನೂನು ಬಾಹಿರವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ತಮ್ಮ ಮೇಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಒಬ್ಬರ ವಿರುದ್ಧ ದಾಖಲಿಸಿದ್ದ ಕೇಸ್‍ನ್ನು ರದ್ದುಪಡಿಸುವ ವೇಳೆ ನ್ಯಾಯಪೀಠ, ಈ ಆದೇಶ ನೀಡಿದೆ.
ಪೀಠವು ತನ್ನ ಆದೇಶದಲ್ಲಿ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪ ಅಸಂಜ್ಞೇಯ(ನಾನ್ ಕಾಗ್ನಿಜಬಲ್) ಅಪರಾಧ ಕೃತ್ಯ ಸ್ವರೂಪದ್ದಾಗಿದೆ. ಈ ಪ್ರಕರಣದಲ್ಲಿ ದೂರು ದಾಖಲಾಗಿ 4 ವರ್ಷಗಳ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಸಿಆರ್‍ಪಿಸಿ ಸೆಕ್ಷನ್ 468(2)(ಸಿ) ಇದನ್ನು ನಿರ್ಬಂಧಿಸುತ್ತದೆ ಎಂದಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ತೆಗೆದುಕೊಂಡಿದ್ದ ಕಾಗ್ನಿಜೆನ್ಸ್ ಮತ್ತು ಕೆ.ಆರ್.ಪೇಟೆ ಟೌನ್ ಠಾಣೆ ಪೊಲೀಸರು ದಾಖಲಿಸಿದ್ದ ದೂರನ್ನು ರದ್ದುಪಡಿಸಿದೆ.