ಕುಸ್ತಿಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ಬಿಜೆಪಿಯ ದುರಹಂಕಾರದ ಪರಮಾವಧಿ: ರಾಮಚಂದ್ರ ಗುಹಾ
ಬೆಂಗಳೂರು, ಮೇ 28: ‘ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಸ್ಥಾನದಲ್ಲಿರುವ ಬಿಜೆಪಿ ಸಂಸದನನ್ನು ಬಂಧಿಸದೆ, ಹೋರಾಟಗಾರರಿಗೆ ಕಿರುಕುಳ ನೀಡುತ್ತಿರುವುದು ಬಿಜೆಪಿಯ ದುರಾಹಂಕಾರದ ಪರಮಾವಧಿಯಾಗಿದೆ’ ಎಂದು ಲೇಖಕ ರಾಮಚಂದ್ರ ಗುಹಾ ಆರೋಪಿಸಿದ್ದಾರೆ.
ರವಿವಾರ ಭಾರತೀಯ ಕುಸ್ತಿಪಟುಗಳ ಪೆಡೆರೇಷನ್‍ನ ಅಧ್ಯಕ್ಷನ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಮಹಿಳಾ ಕುಸ್ತಿಪಟುಗಳು ದಿಲ್ಲಿಯಲ್ಲಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ, ವಿವಿಧ ಸಂಘಟನೆಗಳು ಸೇರಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರವು ಅನ್ಯಾಯಕ್ಕೆ ಒಳಗಾದ ಕ್ರೀಡಾಪಟುಗಳನ್ನು ರಕ್ಷಿಸುವ ಬದಲು ಅಪರಾಧಿಗಳನ್ನು ರಕ್ಷಿಸುತ್ತಿದೆ. ದೇಶಕ್ಕೆ ಚಿನ್ನದ ಪದಕಗಳನ್ನು ಗೆದ್ದು ತಂದ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದೆ. ಆದರೆ ಸರಕಾರ ಕುಸ್ತಿಪಟುಗಳನ್ನು ಕಡೆಗಣಿಸುತ್ತಿರುವ ಖಂಡನೀಯ ಎಂದು ಅವರು ಟೀಕಿಸಿದರು.
ಚಾಂಪಿಯನ್ ಈಜುಗಾರ್ತಿ ನಿಶಾ ಮಿಲೆಟ್ ಮಾತನಾಡಿ, ‘ರಾಷ್ಟ್ರದ ಹೆಮ್ಮೆಯಾಗಿರುವ ಒಲಂಪಿಕ್ ತಾರೆಗಳನ್ನು ಎಳೆದೊಯ್ದ ಪ್ರಕರಣವು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜಕಾರಣಿಗಳು ಕ್ರೀಡಾಪಟುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕ್ರೀಡಾ ಕ್ಷೇತ್ರದ ಪೆಡರೇಶನಗಳಿಗೆ ನೇಮಕವಾಗಬೇಕು. ಆದರೆ ಬಿಜೆಪಿ ಸಂಸದ ಲೈಂಗಿಕ ಕಿರುಕುಳದಲ್ಲಿ ತೊಡಗಿದ್ದಾರೆ ಎಂದರು.
ಸ್ಟಾರ್ ಅಥ್ಲೀಟ್ ರೀತ್ ಅಬ್ರಹಾಂ ಮಾತನಾಡಿ, ನಾವು ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳ ಪರವಾಗಿ ನಿಲ್ಲುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಸಂತ್ರಸ್ತರಿಗೆ ನ್ಯಾಯವನ್ನು ಕೋಡಿಸುವಲ್ಲಿ ಅವರನ್ನು ಬೆಂಬಲಿಸುತ್ತೇವೆ. ನಾವು ರಾಜಕಾರಣಿಗಳನ್ನು ಕ್ರೀಡಾ ಕ್ಷೇತ್ರದಿಂದ ಹೊರಹಾಕಿದ ನಿಮಿಷದಲ್ಲಿಯೇ ಎಲ್ಲವೂ ಸರಿಯಾಗುತ್ತದೆ.
ವನ್ಯಜೀವಿ ಕಾರ್ಯಕರ್ತ ಜೋಸೆಫ್ ಹೂವರ್ ಮಾತನಾಡಿ, ಸಂಸದ ಮತ್ತು ಕುಸ್ತಿ ಅಸೋಸಿಯೇಶನ್ ಅಧ್ಯಕ್ಷ ಬ್ರಿಜ್ ಬೂಷನ್ ಸಿಂಗ್ ಅವರನ್ನು ತಕ್ಷಣ ಬಂಧಿಸಬೇಕು. ವಿಚಾರಣೆಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಲೈಂಗಿಕ ಕಿರುಕುಳದ ವಿರುದ್ಧ ದೂರುಗಳನ್ನು ದಾಖಲಿಸಲು ಕ್ರೀಡಾ ಫೆಡರೇಶನ್‍ಗಳಲ್ಲಿ ಸಮಿತಿಗಳನ್ನು ಸ್ಥಾಪಿಸಲು ಕಾನೂನು ಅಥವಾ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಬೇಕಾಗಿದೆ ಎಂದರು.
ಇದೇ ವೇಳೆ ಬಂಧಿತ ಎಲ್ಲ ಕುಸ್ತಿಪಟುಗಳನ್ನು ಬಿಡುಗಡೆ ಮಾಡಿ, ಲೈಂಗಿಕ ಅಪರಾಧಿಗಳನ್ನು ಬಂಧಿಸಬೇಕು. ಲೈಂಗಿಕ ಕಿರುಕುಳವನ್ನು ನಿಲ್ಲಿಸಿ, ಕ್ರೀಡಾಪಟುಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸಬೇಕು. ಪ್ರತಿಭಟನಾಕಾರರ ವಿರುದ್ಧ ದಂಡನಾತ್ಮಕ ಕ್ರಮವನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹೋರಾಟಗಾರ ಅಮನದೀಪ್ ಸಿಂಗ್,ಚಿತ್ರನಟ ಪ್ರಕಾಶ್ ಬಾರೆ, ತಾರಾ ಕೃಷ್ಣಸ್ವಾಮಿ, ಜೂಡೋ ಒಲಿಂಪಿಯನ್ ನಜೀಬ್ ಆಗಾ ಮತ್ತಿತರರು ಉಪಸ್ಥಿತರಿದ್ದರು.