ಪಾಕಿಸ್ತಾನ: ಇಮ್ರಾನ್ ಪಕ್ಷಕ್ಕೆ ಸ್ಥಾಪಕ ಸದಸ್ಯ ಇಸ್ಮಾಯಿಲ್ ರಾಜೀನಾಮೆ
ಇಸ್ಲಮಾಬಾದ್: ಸಿಂಧ್ ಪ್ರಾಂತದ ಮಾಜಿ ಗವರ್ನರ್, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟವರ್ತಿ, ಪಿಟಿಐ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಇಮ್ರಾನ್ ಇಸ್ಮಾಯಿಲ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಇಸ್ಮಾಯಿಲ್ ರ ಬಿಡುಗಡೆಗೆ ಆದೇಶಿಸಿದ ಕೆಲವೇ ಕ್ಷಣಗಳಲ್ಲಿ ಇಸ್ಮಾಯಿಲ್ ಪಕ್ಷ ತೊರೆಯುವ ಹೇಳಿಕೆ ನೀಡಿದ್ದಾರೆ. ಕರಾಚಿಯ ಕೇಂದ್ರ ಕಾರಾಗ್ರಹದಲ್ಲಿ ಬಂಧನದಲ್ಲಿದ್ದ ಇಸ್ಮಾಯಿಲ್ 50,000 ರೂ.ಯ ವೈಯಕ್ತಿಕ ಮುಚ್ಚಳಿಕೆ ಒದಗಿಸಿದ ಹಿನ್ನೆಲೆಯಲ್ಲಿ ಅವರ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿತ್ತು.
ಮೇ 9ರಂದು ಇಮ್ರಾನ್ ಬಂಧನವನ್ನು ವಿರೋಧಿಸಿ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು ಮತ್ತು ಸರಕಾರದ ಕಟ್ಟಡ, ಕಚೇರಿ, ಸೇನೆಯ ಕೇಂದ್ರ ಕಚೇರಿಯ ಮೇಲೆಯೂ ದಾಳಿ ನಡೆಸಲಾಗಿದೆ. ಇದನ್ನು ಖಂಡಿಸಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಹಲವು ಪ್ರಮುಖ ಬೆಂಬಲಿಗರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಕಳೆದೊಂದು ವಾರದಿಂದ ಮೂವರು ಪ್ರಮುಖ ಮುಖಂಡರು ರಾಜೀನಾಮೆ ಘೋಷಿಸಿದ್ದಾರೆ.
ಇಮ್ರಾನ್ ಅವರ ಕಟ್ಟಾ ಬೆಂಬಲಿಗ, ಟಿವಿ ಚರ್ಚೆಗಳಲ್ಲಿ ಇಮ್ರಾನ್ರನ್ನು ಸದಾ ಬೆಂಬಲಿಸಿ ವಾದ ಮಂಡಿಸುತ್ತಿದ್ದ ಇಸ್ಮಾಯಿಲ್ ಸುದ್ಧಿಗೋಷ್ಟಿಯಲ್ಲಿ ರಾಜೀನಾಮೆ ಪ್ರಕಟಿಸಿದ್ದಾರೆ. ‘ಖಾನ್ ಸಾಹೇಬರೇ, ನಿಮ್ಮಿಂದ ಮತ್ತು ಪಿಟಿಐ ಪಕ್ಷದಿಂದ ದೂರವಾಗಲು ನಾನು ನಿರ್ಧರಿಸಿದ್ದೇನೆ. ಹಿಂಸಾಚಾರ ಯಾರೇ ನಡೆಸಲಿ, ಒಂದು ದೇಶವಾಗಿ ನಾವದನ್ನು ವಿರೋಧಿಸಬೇಕಾಗಿದೆ. ಪಿಟಿಐ ಪಕ್ಷವನ್ನು ಸ್ಥಾಪಿಸಿದ ನಾಲ್ವರಲ್ಲಿ ನಾನೂ ಒಬ್ಬನಾಗಿದ್ದೆ. ದೀರ್ಘಾವಧಿಯ ಹೋರಾಟದಲ್ಲಿ ನಿಮ್ಮೊಂದಿಗೆ(ಇಮ್ರಾನ್ ಖಾನ್) ಜತೆಗೂಡಿ ಸಾಗಿದ್ದೇನೆ. ಆ ದಾರಿಯಲ್ಲಿ ಏರಿಳಿತಗಳಿದ್ದವು. ಆದರೆ ಸಮೃದ್ಧ ಪಾಕಿಸ್ತಾನದ ಕನಸನ್ನು ನಾವು ಕಂಡಿದ್ದೆವು’ ಎಂದು ಇಸ್ಮಾಯಿಲ್ ಹೇಳಿದ್ದಾರೆ.
ಇಮ್ರಾನ್ ಅನರ್ಹಗೊಂಡರೆ ಖುರೇಷಿಗೆ ಪಕ್ಷದ ಸಾರಥ್ಯ: ವರದಿ
ನ್ಯಾಯಾಲಯವು ಒಂದು ವೇಳೆ ತನ್ನನ್ನು ಅನರ್ಹಗೊಳಿಸಿದರೆ ಪಕ್ಷದ ಉಪಾಧ್ಯಕ್ಷ ಶಾ ಮಹ್ಮೂದ್ ಖುರೇಶಿ ಪಕ್ಷದ ಸಾರಥ್ಯ ವಹಿಸಲಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(PTI) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಲಾಹೋರ್ ನಲ್ಲಿನ ತನ್ನ ನಿವಾಸದಲ್ಲಿ ಪತ್ರಕರ್ತರು ಹಾಗೂ ನ್ಯಾಯವಾದಿಗಳೊಂದಿಗೆ ಸಭೆ ನಡೆಸಿದ ಇಮ್ರಾನ್ಖಾನ್ ‘ನನ್ನನ್ನು ಅನರ್ಹಗೊಳಿಸಿದರೆ ಖುರೇಷಿ ಪಕ್ಷವನ್ನು ಮುನ್ನಡೆಸಲಿದ್ದಾರೆ’ ಎಂದರು. ಕಳೆದ ವರ್ಷದ ಎಪ್ರಿಲ್ ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿರುವ ಇಮ್ರಾನ್ ವಿರುದ್ಧ ಭ್ರಷ್ಟಾಚಾರ, ಭಯೋತ್ಪಾದನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.
ಪಿಟಿಐ ಪಕ್ಷಕ್ಕೆ ಹಲವು ಮುಖಂಡರು, ಬೆಂಬಲಿಗರು ರಾಜೀನಾಮೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಇಮ್ರಾನ್ ‘ಕೆಲವರನ್ನು ಬೆದರಿಸಿ, ಒತ್ತಡ ಹಾಕಿ ರಾಜೀನಾಮೆ ಕೊಡಿಸಲಾಗುತ್ತಿದೆ. ಇನ್ನು ಕೆಲವರ ಬಣ್ಣ ಈಗ ಬಯಲಾಗುತ್ತಿದೆ. ಏನೇ ಆದರೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವನ್ನು ಯಾರೂ ತಡೆಯಲಾರರು’ ಎಂದರು.