‘ಸೆಂಗೋಲ್’ಸ್ಥಾಪನೆಗೆ ಮೂಲಭೂತವಾದಿ ಬ್ರಾಹ್ಮಣ ಗುರುಗಳನ್ನು ಮಾತ್ರ ಆಹ್ವಾನಿಸಿದ್ದಕ್ಕೆ ಬಿಜೆಪಿಗೆ ಮೌರ್ಯ ತರಾಟೆ

ಲಕ್ನೋ: ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಅವರು ರವಿವಾರ ಉದ್ಘಾಟನೆಗೊಂಡ ನೂತನ ಸಂಸತ್ ಕಟ್ಟಡದಲ್ಲಿ ರಾಜದಂಡ ‘ಸೆಂಗೋಲ್’ ಸ್ಥಾಪನೆಗೆ ಮೂಲಭೂತವಾದಿ ಬ್ರಾಹ್ಮಣ ಗುರುಗಳನ್ನು ಮಾತ್ರ ಆಹ್ವಾನಿಸಿದ್ದಕ್ಕೆ ಬಿಜೆಪಿಯನ್ನು ತೀವ್ರ ತರಾಟೆಗೆತ್ತಿಕೊಂಡರು.
ಬಿಜೆಪಿ ಸರಕಾರಕ್ಕೆ ಭಾರತದ ಜಾತ್ಯತೀತತೆ ಮತ್ತು ಸಾರ್ವಭೌಮತ್ವದಲ್ಲಿ ನಂಬಿಕೆಯಿದ್ದರೆ ಉದ್ಘಾಟನಾ ಸಮಾರಂಭಕ್ಕೆ ದೇಶದಲ್ಲಿ ಆಚರಣೆಯಲ್ಲಿರುವ ಎಲ್ಲ ಧರ್ಮಗಳ ಪುರೋಹಿತರನ್ನು ಆಹ್ವಾನಿಸುತ್ತಿತ್ತು ಎಂದರು.
‘ಸೆಂಗೋಲ್ ಸ್ಥಾಪನೆಗೆ ಕೇವಲ ದಕ್ಷಿಣ ಭಾರತದ ಮೂಲಭೂತವಾದಿ ಬ್ರಾಹ್ಮಣ ಗುರುಗಳನ್ನು ಆಹ್ವಾನಿಸಿದ್ದು ಅತ್ಯಂತ ದುರದೃಷ್ಟಕರವಾಗಿದೆ. ಬಿಜೆಪಿ ಸರಕಾರವು ಭಾರತವು ಜಾತ್ಯತೀತ ಸಾರ್ವಭೌಮ ದೇಶವಾಗಿದೆ ಎಂಬ ನಂಬಿಕೆಯನ್ನು ಹೊಂದಿದ್ದಿದ್ದರೆ ಬೌದ್ಧ ಧರ್ಮಾಚಾರ್ಯರು,ಜೈನ ಮುನಿಗಳು, ಗುರು ಗ್ರಂಥಿಗಳು,ಮುಸ್ಲಿಮ್ ಮತ್ತು ಕ್ರೈಸ್ತ ಧರ್ಮಗುರುಗಳು ಇತ್ಯಾದಿ ದೇಶದ ಎಲ್ಲ ಧಾರ್ಮಿಕ ನಾಯಕರನ್ನು ಆಹ್ವಾನಿಸಲಾಗುತ್ತಿತ್ತು.
ಆದರೆ ಹಾಗೆ ಮಾಡದಿರುವ ಮೂಲಕ ಬಿಜೆಪಿ ತನ್ನ ನೀಚ ಮತ್ತು ತುಚ್ಛ ಮನಃಸ್ಥಿತಿಯನ್ನು ತೋರಿಸಿದೆ. ಸೆಂಗೋಲ್‌ನ್ನು ಸ್ಥಾಪಿಸುವ ಮೂಲಕ ಬಿಜೆಪಿ ಸರಕಾರವು ನಿರಂಕುಶ ಪ್ರಭುತ್ವದ ಹಾದಿಯಲ್ಲಿ ಸಾಗುತ್ತಿದೆ ಮತ್ತು ದಕ್ಷಿಣ ಭಾರತದ ಬ್ರಾಹ್ಮಣ ಧಾರ್ಮಿಕ ನಾಯಕರನ್ನು ಕರೆಸುವ ಮೂಲಕ ಬ್ರಾಹ್ಮಣವಾದವನ್ನು ಸ್ಥಾಪಿಸಲೂ ಪ್ರಯತ್ನಿಸುತ್ತಿದೆ ’ಎಂದು ಮೌರ್ಯ ಟ್ವೀಟಿಸಿದ್ದಾರೆ.