ಚುನಾವಣೆಗೂ ಮುನ್ನ ನಾಲ್ಕು ತಿಂಗಳ ಅವಧಿಯಲ್ಲಿ ಜಾಹೀರಾತಿಗೆ ರೂ. 44 ಕೋಟಿ ವೆಚ್ಚ ಮಾಡಿದ್ದ ಬಿಜೆಪಿ ಸರ್ಕಾರ
ಆರ್‌ಟಿಐ ಮಾಹಿತಿಯಿಂದ ಬಹಿರಂಗ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಈ ಹಿಂದಿನ ಬಿಜೆಪಿ ಸರ್ಕಾರವು ಮುದ್ರಣ ಹಾಗೂ ವಿದ್ಯುನ್ಮಾನ ಜಾಹೀರಾತುಗಳಿಗಾಗಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ರೂ. 44.42 ಕೋಟಿ ವೆಚ್ಚ ಮಾಡಿದೆ. ಈ ಮೊತ್ತವನ್ನು ಡಿಸೆಂಬರ್ 1, 2022ರಿಂದ ಮಾರ್ಚ್ 29, 2023ರ ನಡುವೆ ವೆಚ್ಚ ಮಾಡಲಾಗಿದೆ ಎಂಬ ಸಂಗತಿ ಮಾಹಿತಿ ಹಕ್ಕು ಅರ್ಜಿಗೆ ದೊರೆತಿರುವ ಉತ್ತರದಿಂದ ಬಹಿರಂಗಗೊಂಡಿದೆ ಎಂದು thehindu.com ವರದಿ ಮಾಡಿದೆ.
ಪುತ್ತೂರು ಮೂಲದ ರಾಜೇಶ್ ಕೃಷ್ಣಪ್ರಸಾದ್ ಎಂಬವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮೇಲಿನಂತೆ ಉತ್ತರ ನೀಡಿದೆ.
ಆದರೆ, ಜಾಹೀರಾತುಗಳನ್ನು ಯಾವ ಯಾವ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಸಾರ ಮಾಡಲಾಗಿದೆ, ಆ ಮಾಧ್ಯಮ ಸಂಸ್ಥೆಗಳ ಹೆಸರೇನು ಎಂಬ ಕುರಿತು ರಾಜೇಶ್ ಕೃಷ್ಣಪ್ರಸಾದ್ ಅವರು ಈವರೆಗೆ ಯಾವುದೇ ವಿವರ ಸ್ವೀಕರಿಸಿಲ್ಲ. ಮಾರ್ಚ್ 29ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು.
ಈ ಉತ್ತರದಲ್ಲಿ ವಿರೋಧ ಪಕ್ಷಗಳ ಭಾರತ್ ಜೋಡೋ ಯಾತ್ರಾ, ಮೇಕೆದಾಟು ಪಾದಯಾತ್ರೆ ಹಾಗೂ ಇನ್ನಿತರ ಕಾರ್ಯಕ್ರಮಗಳ ವಿರುದ್ಧ ಅಭಿಯಾನವೂ ಸೇರಿದಂತೆ ತಮ್ಮ ಸರ್ಕಾರದ ಯೋಜನೆಗಳು, ಕೆಲಸಗಳ ಕುರಿತು ಮುದ್ರಣ ಮಾಧ್ಯಮಕ್ಕೆ ರೂ. 27.46 ಕೋಟಿ ಮೊತ್ತದ ಜಾಹೀರಾತುಗಳನ್ನು ನೀಡಿದ್ದರೆ, ವಿದ್ಯುನ್ಮಾನ ಮಾಧ್ಯಮಕ್ಕೆ ರೂ. 16.96 ಕೋಟಿ ಮೊತ್ತದ ಜಾಹೀರಾತುಗಳನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ.
ಆದರೆ, ಚುನಾವಣೆಯಲ್ಲಿ ಪರಾಭವಗೊಂಡಿದ್ದ ಆಡಳಿತಾರೂಢ ಬಿಜೆಪಿ 66 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದರೆ, ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ದಾಖಲಿಸಿತ್ತು.