ಉಡುಪಿ ಜಿಲ್ಲೆಯ 1096 ಶಾಲೆಗಳು ಪುನಾರಂಭಕ್ಕೆ ಸಜ್ಜು; ಪಠ್ಯಪುಸ್ತಕ, ಸಮವಸ್ತ್ರ ವಿತರಣೆ
ಮಳೆಗಾಲದ ಪೂರ್ವಸಿದ್ಧತೆಗೆ ಸೂಚನೆ
ಉಡುಪಿ, ಮೇ 29: ಉಡುಪಿ ಜಿಲ್ಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದೊಂದಿಗೆ ಶಾಲಾರಂಭಕ್ಕೆ ಜಿಲ್ಲಾ ಸಾರ್ವ ಜನಿಕ ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮೇ 31ಕ್ಕೆ ಜಿಲ್ಲೆಯಲ್ಲಿರುವ ಒಟ್ಟು 1096 ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಪುನರಾರಂಭಗೊಳ್ಳಲಿವೆ.
ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಬೇಸಿಗೆ ರಜೆಗೆ ಮೊದಲೇ ಅಂದರೆ ಮಾರ್ಚ್ ತಿಂಗಳ ಅಂತ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಿಗೂ ಪೂರೈಕೆ ಮಾಡಲಾಗಿದೆ. ಅವುಗಳನ್ನು ಮಾ.31 ರಂದು ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ.
ಮೇ 29 ಮತ್ತು 30ರಂದು ಶಾಲೆಗಳನ್ನು ಸ್ವಚ್ಛತೆ ಮಾಡಿಕೊಳ್ಳಲಾಗುತ್ತದೆ. ದಾಖಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹೊಂದಿಸಿಕೊಳ್ಳಲಾಗುತ್ತದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಕುಸಿಯುವ ಕಟ್ಟಡ ಇದ್ದರೆ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಬಿಸಿಯೂಟ, ಸ್ವಚ್ಛತೆ ಬಗ್ಗೆ ಎಲ್ಲ ರೀತಿಯ ತಯಾರಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ. ತಿಳಿಸಿದ್ದಾರೆ.
ಮಾ.31ರ ಪ್ರಾರಂಭೋತ್ಸವದಲ್ಲಿ ಶಾಲೆಗಳಿಗೆ ತಳೀರು ತೋರಣ ಕಟ್ಟಿ ಮಕ್ಕಳನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲಾಗುತ್ತದೆ. ವಿವಿಧ ಚಟುವಟಿಕೆ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟ ಜೊತೆ ಸಿಹಿ ನೀಡುವಂತೆ ಸೂಚಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಸ್‌ಡಿ ಎಂಸಿ, ಪೋಷಕರು ಮತ್ತ್ತು ಸ್ಥಳೀಯರ ಜನಪ್ರತಿನಿಧಿಗಳನ್ನು ಕೂಡ ಸೇರಿಸಿ ಕೊಳ್ಳಲಾಗುತ್ತದೆ ಎಂದರು.
ಈಗಾಗಲೇ ಎಲ್ಲ ತಾಲೂಕುಗಳಲ್ಲಿ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಿ, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಸರಕಾರಿ ಶಾಲೆಗಳಲ್ಲಿ ಜೂ.30ರವರೆಗೆ ದಾಖಲಾತಿಗೆ ಅವಕಾಶ ಇದ್ದು, ಈ ಬಾರಿಯು ಉತ್ತಮ ದಾಖಲಾತಿ ನಡೆಯಲಿದೆ ಎಂಬ ವಿಶ್ವಾಸ ಇದೆ ಎಂದು ಗಣಪತಿ ಕೆ. ಪತ್ರಿಕೆಗೆ ತಿಳಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ 72 ಸರಕಾರಿ ಶಾಲೆಗಳು ಮಕ್ಕಳ ಸ್ವಾಗತಕ್ಕೆ ಸಜ್ಜಾಗಿವೆ. ಉಡುಪಿ ನಗರದ ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9ಗಂಟೆಗೆ ಶಾಸಕ ಯಶ್‌ಪಾಲ್ ಸುವರ್ಣ ಪ್ರಾರಂಭೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಉಡುಪಿ ವಿಧಾನ ಸಭೆ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕ ಸಮಿತಿಯ ಸದಸ್ಯರು, ಶಿಕ್ಷಣ ಪ್ರೇಮಿಗಳು ಸಂಬಂಧಿಸಿದ ಸಮೀಪದ ತಮ್ಮ ಶಾಲೆಗಳ ವ್ಯಾಪ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಸಂಭ್ರಮ ಹೆಚ್ಚಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.
ಶಾಸಕರು ಪ್ರವರ್ತಕರಾಗಿರುವ ಪುಷ್ಪಾನಂದ ಫೌಂಡೇಶನ್ ವತಿಯಿಂದ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಉಡುಪಿ ವಿಧಾನ ಸಭಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಯ ಸುಮಾರು 12,000 ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
"ಶಾಲಾ ಪ್ರಾರಂಭೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಶಾಲೆಗಳಿಗೆ ಮೇ 31ರಿಂದ ಮಕ್ಕಳು ಹಾಜರಾಗಲಿದ್ದಾರೆ. ಯಾವುದೇ ಶಾಲೆಗಳಲ್ಲಿ ನೀರಿನ ಸಮಸ್ಯೆಗಳಿದ್ದರೆ ಆಯಾ ಸ್ಥಳೀಯ ಗ್ರಾಪಂಗಳ ಪಿಡಿಓ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು".
-ಗಣಪತಿ ಕೆ., ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ
"ರಾಜ್ಯದಲ್ಲಿ ದಿನದಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಉಡುಪಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಬಿಸಿಲ ತಾಪ ಮತ್ತು ಕುಡಿಯುವ ನೀರಿನ ಸಮಸ್ಯೆ ಕಾರಣದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಂದ ಮುಖ್ಯಮಂತ್ರಿಗಳು ಬೇಸಿಗೆ ರಜೆಯನ್ನು ಜೂ.7ರವರೆಗೆ ವಿಸ್ತರಿಸಬೇಕು. ಈ ಹೆಚ್ಚುವರಿಯಾಗಿ ನೀಡಿದ ರಜೆಯನ್ನು ಶಾಲೆಗಳಲ್ಲಿ ನೀಡು ತ್ತಿರುವ ರಜೆಗಳನ್ನು ಕಡಿತಗೊಳಿಸಿ ಸರಿದೂಗಿಸಲು ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಗೆ ಆದೇಶಿಸಬೇಕು".
-ಎಂ.ಪಿ.ಮೊದಿನಬ್ಬ, ಪೋಷಕರು