ಮರಿಕ್ಕಳ ಜುಮಾ ಮಸ್ಜಿದ್ ನ ನೂತನ ಮದ್ರಸ ಕಟ್ಟಡಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಶಿಲಾನ್ಯಾಸ

ಕೊಣಾಜೆ: ಮೊಂಟೆಪದವು ಸಮೀಪದ ಮರಿಕ್ಕಳ ಜುಮಾ ಮಸ್ಜಿದ್ ನ ನೂತನ ಮದ್ರಸ ಕಟ್ಟಡಕ್ಕೆ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣ ಎಂಬುದು ಪ್ರತಿಯೊಬ್ಬನಿಗೂ ಅಗತ್ಯವಾಗಿದೆ. ಮದ್ರಸ ಶಿಕ್ಷಣವು ಎಳವೆಯಲ್ಲಿಯೇ ಧಾರ್ಮಿಕ ಶಿಕ್ಷಣ ಹಾಗೂ ಅದರ ಮಹತ್ವವನ್ನು ಅರಿಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಉತ್ತಮ ವಿದ್ಯಾಭ್ಯಾಸ ದೊಂದಿಗೆ ತಂದೆ ತಾಯಿಯಂದಿರ ಸಂಪತ್ತು ಆಗುವುದರೊಂದಿಗೆ ಸಮಾಜದ ಆಸ್ತಿಯಾಗಿ ರೂಪುಗೊಳ್ಳಬೇಕು ಎಂದರು.
ಆದಷ್ಟು ಶೀಘ್ರವಾಗಿ ಈ ನೂತನ ಮದ್ರಸ ಕಟ್ಟಡವು ನಿರ್ಮಾಣಗೊಂಡು ಉದ್ಘಾಟನೆಯಾಗುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮರಿಕ್ಕಳ ಜಮಾಅತ್ ನ ಖಾಝಿ ಹಾಗೂ ಜಂಇಯ್ಯಂತುಲ್ ಉಲಮಾ ಕರ್ನಾಟಕ ಇದರ ಅಧ್ಯಕ್ಷರಾದ ಝೈನುಲ್ ಉಲಮಾ ಮಾಣಿ ಉಸ್ತಾದ್, ಮುಹಿಮ್ಮಾತ್ ಮುಸ್ಲಿಮಿನ್ ಎಜ್ಯುಕೇಶನ್ ಸೆಂಟರ್ ನ ಉಪಾಧ್ಯಕ್ಷರಾದ ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಪ್ರಾರ್ಥನೆಯೊಂದಿಗೆ ಶುಭ ಹಾರೈಸಿದರು.
ಮರಿಕ್ಕಳ ಜಮಾಅತ್ ನ ಅಧ್ಯಕ್ಷರಾದ ಅಬ್ಬಾಸ್ ಕೊಡಂಚಿಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಮರಿಕ್ಕಳ ಜಮಾಅತ್ ನ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ, ಝೈನುಲ್ ಅಬಿದ್ ಸಖಾಪಿ, ಅಬ್ದುಲ್ ಜಬ್ಬಾರ್ ಸ ಅದಿ, ಕೋಶಾಧಿಕಾರಿ ಹನೀಫ್ ಸಿ.ಎಚ್, ಪಂಚಾಯತಿ ಸದಸ್ಯ ರಹಿಮಾನ್ ಸಿ.ಎಚ್., ಸ್ಥಳೀಯ ಮುಖಂಡರಾದ ಪ್ರಭಾಕರ ಶೆಟ್ಟಿ ಮರಿಕ್ಕಳ, ರೋಮ್ರಿಕ್ ಡಿಸೋಜಾ ಬೋಳ ಮೊದಲಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಅಬ್ದುಲ್ ಜಲೀಲ್ ಮೋಂಟುಗೋಳಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.