ದ.ಕ.ಜಿಲ್ಲೆ: ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಾಲೆಗಳಲ್ಲಿ ಸಿದ್ಧತೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಸೋಮವಾರದಿಂದ ತೆರೆಯಲ್ಪಟ್ಟಿದ್ದು, ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ವಿದ್ಯಾರ್ಥಿಗಳು ಮೇ 31ರಿಂದ ಶಾಲೆಗೆ ತೆರಳಲಿದ್ದು, ಅಂದು ಅದ್ದೂರಿಯ ಪ್ರಾರಂಭೋತ್ಸವ ನಡೆಯಲಿದೆ.
ಅಂದೇ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆಯಾಗಲಿದೆ. ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ (ಪ್ರಾಥಮಿಕ ಮತ್ತು ಫ್ರೌಢ) 1881 ಶಾಲೆಗಳಿವೆ. ಈ ಎಲ್ಲಾ ಶಾಲೆಗಳು ಸೋಮವಾರ ತೆರೆದುಕೊಂಡಿತ್ತು. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯು ವಿದ್ಯಾರ್ಥಿಗಳ ಸ್ವಾಗತಿಸುವ ನಿಟ್ಟಿನಲ್ಲಿ ಪೂರ್ವ ತಯಾರಿ ಆರಂಭಿಸಿದ್ದಾರೆ.
ಮಂಗಳವಾರವೂ ತಯಾರಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಮವಾರ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಶೈಕ್ಷಣಿಕ ವರ್ಷದ ಆರಂಭಕ್ಕೆ ಬೇಕಾದ ಸಿದ್ಧತೆ, ಶಾಲಾ ಆವರಣದ ಸ್ವಚ್ಛತೆ, ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಲಾಯಿತು. ವಿದ್ಯಾರ್ಥಿಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಯಿತು. ಅದಲ್ಲದೆ ಶಾಲಾರಂಭಕ್ಕೆ ತಳಿರು ತೋರಣಗಳನ್ನು ಕಟ್ಟುವ ಪ್ರಕ್ರಿಯೆಯೂ ನಡೆಯಿತು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಯಾವ ಶಾಲೆಯಲ್ಲೂ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮೂಡುಬಿದಿರೆ ವಲಯದಲ್ಲಿ 15 ಹಾಗೂ ಬೆಳ್ತಂಗಡಿ ವಲಯದಲ್ಲಿ 24 ಶಾಲೆಗಳಿಗೆ ನೀರಿನ ಸಮಸ್ಯೆ ಇದೆ ಎಂದು ಆಯಾ ಬಿಇಒಗಳು ತಿಳಿಸಿದ್ದಾರೆ. ಸ್ಥಳೀಯ ಗ್ರಾಪಂಗಳ ಸಹಕಾರದಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ದ.ಕ. ಡಿಡಿಪಿಐ ದಯಾನಂದ ನಾಯಕ್ ತಿಳಿಸಿದ್ದಾರೆ.