ಗುರುತು ಪುರಾವೆಯಿಲ್ಲದೆ 2,000 ನೋಟಿನ ವಿನಿಮಯ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಯಾವುದೇ ಲಿಖಿತ ಕೋರಿಕೆ ಅಥವಾ ಗುರುತು ಚೀಟಿಯಿಲ್ಲದೆ 2,000 ರೂ.ನೋಟುಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಿರುವ ಆರ್‌ಬಿಐ ಮತ್ತು ಎಸ್ಬಿಐ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ ಕುಮಾರ ಶರ್ಮಾ ಮತ್ತು ನ್ಯಾ.ಸುಬ್ರಮಣಿಯಂ ಪ್ರಸಾದ ಅವರ ಪೀಠವು ಈ ಆದೇಶವನ್ನು ಹೊರಡಿಸಿದೆ.
ದೊಡ್ಡ ಮೊತ್ತದ ಕರೆನ್ಸಿ ವ್ಯಕ್ತಿಗತ ಲಾಕರ್ಗಳನ್ನು ತಲುಪಿದೆ ಅಥವಾ ಪ್ರತ್ಯೇಕತಾವಾದಿಗಳು, ಭಯೊತ್ಪಾದಕರು, ಮಾದಕದ್ರವ್ಯ ಕಳ್ಳಸಾಗಣೆದಾರರು, ಗಣಿ ಮಾಫಿಯಾಗಳು ಮತ್ತು ಭ್ರಷ್ಟ ಜನರ ಬಳಿ ಶೇಖರವಾಗಿದೆ ಎಂದು ತನ್ನ ಅರ್ಜಿಯಲ್ಲಿ ತಿಳಿಸಿದ್ದ ನ್ಯಾಯವಾದಿ ಅಶ್ವಿನಿಕುಮಾರ ಉಪಾಧ್ಯಾಯ ಅವರು,ಅಧಿಸೂಚನೆಗಳು ನಿರಂಕುಶ ಮತ್ತು ಅತಾರ್ಕಿಕವಾಗಿದ್ದು,ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಿವೆ ಎಂದು ವಾದಿಸಿದ್ದರು.
ಉಚ್ಚ ನ್ಯಾಯಾಲಯದಲ್ಲಿ ತನ್ನ ಅಧಿಸೂಚನೆಯನ್ನು ಸಮರ್ಥಿಸಿಕೊಂಡಿದ್ದ ಆರ್ಬಿಐ,ಇದು ನೋಟು ನಿಷೇಧವಲ್ಲ,ಶಾಸನಬದ್ಧ ಪ್ರಕ್ರಿಯೆಯಾಗಿದೆ ಎಂದು ಹೇಳಿತ್ತು.