ಐಪಿಎಲ್ ಫೈನಲ್: ಸಿಎಸ್‌ಕೆ ಗೆಲುವಿಗೆ 215 ರನ್ ಗುರಿ ನೀಡಿದ ಗುಜರಾತ್ ಟೈಟಾನ್ಸ್
ಸುದರ್ಶನ್, ಸಹಾ ಅರ್ಧಶತಕ

ಅಹಮದಾಬಾದ್, ಮೇ 29: ಸಾಯಿ ಸುದರ್ಶನ್(96 ರನ್, 47 ಎಸೆತ, 8 ಬೌಂಡರಿ, 6 ಸಿಕ್ಸರ್) ಹಾಗೂ ವೃದ್ದಿಮಾನ್ ಸಹಾ(54 ರನ್, 39 ಎಸೆತ,5 ಬೌಂಡರಿ, 1 ಸಿಕ್ಸರ್)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ 215 ರನ್ ಗುರಿ ನೀಡಿದೆ.
ಸೋಮವಾರ ಟಾಸ್ ಜಯಿಸಿದ ಸಿಎಸ್‌ಕೆ ನಾಯಕ ಧೋನಿ ಅವರು ಹಾರ್ದಿಕ್ ಪಾಂಡ್ಯನೇತೃತ್ವದ ಗುಜರಾತ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು.
ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಇನಿಂಗ್ಸ್ ಆರಂಭಿಸಿದ ಸಹಾ ಹಾಗೂ ಶುಭಮನ್ ಗಿಲ್(39 ರನ್, 20 ಎಸೆತ, 7 ಬೌಂಡರಿ)ಮೊದಲ ವಿಕೆಟ್‌ಗೆ 67 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಗಿಲ್ ವಿಕೆಟನ್ನು ಉರುಳಿಸಿದ ರವೀಂದ್ರ ಜಡೇಜ ಈ ಜೋಡಿಯನ್ನು ಬೇರ್ಪಡಿಸಿದರು.
ಗಿಲ್ ಔಟಾದ ನಂತರ ಸುದರ್ಶನ್ ಜೊತೆ ಕೈಜೋಡಿಸಿದ ಸಹಾ 2ನೇ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದರು.
ಸಹಾ ಅರ್ಧಶತಕ ಗಳಿಸಿ ಔಟಾದರು. ಆಗ ನಾಯಕ ಹಾರ್ದಿಕ್ ಪಾಂಡ್ಯರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದ ಸುದರ್ಶನ್ ಗುಜರಾತ್ ಸ್ಕೋರನ್ನು 200ರ ಗಡಿ ದಾಟಿಸಲು ನೆರವಾದರು. ಕೊನೆಯ ಓವರ್‌ನಲ್ಲಿ ಪಥಿರಣ ಬೀಸಿದ ಎಲ್ಬಿಬಲೆಗೆ ಬಿದ್ದ ಸುದರ್ಶನ್ ಕೇವಲ 4 ರನ್‌ನಿಂದ ಶತಕ ವಂಚಿತರಾದರು.
ನಾಯಕ ಪಾಂಡ್ಯ ಔಟಾಗದೆ 21 ರನ್(12 ಎಸೆತ)ಗಳಿಸಿದರು.
ಚೆನ್ನೈ ಪರ ಮಥೀಶ ಪಥಿರನ(2-44) ಯಶಸ್ವಿ ಬೌಲರ್ ಎನಿಸಿಕೊಂಡರು. ರವೀಂದ್ರ ಜಡೇಜ(1-38) ಹಾಗೂ ದೀಪಕ್ ಚಹಾರ್(1-38)ತಲಾ ಒಂದು ವಿಕೆಟ್ ಪಡೆದರು.