ಮರಣ ದಂಡನೆ ಕೋರಿ ಎನ್‌ಐಎ ಅರ್ಜಿ: ಯಾಸಿನ್ ಮಲಿಕ್‌ಗೆ ದಿಲ್ಲಿ ಹೈಕೋರ್ಟ್ ನೋಟಿಸ್
ಹೊಸದಿಲ್ಲಿ, ಮೇ 28: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಮರಣ ದಂಡನೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ಪ್ರಸಕ್ತ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಸೋಮವಾರ ನೋಟಿಸು ನೀಡಿದೆ.
ಯಾಸಿನ್ ಮಲಿಕ್ ಅವರನ್ನು ಆಗಸ್ಟ್ 9ರಂದು ತನ್ನ ಮುಂದೆ ಹಾಜರುಪಡಿಸುವಂತೆ ಕೂಡ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಹಾಗೂ ತಲ್ವಂತ್ ಸಿಂಗ್ ಅವರನ್ನು ಒಳಗೊಂಡ ಪೀಠ ವಾರಂಟ್ ಜಾರಿ ಮಾಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಯಾಸಿನ್ ಮಲಿಕ್ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಅವರಿಗೆ ಮರಣದಂಡನೆ ವಿಧಿಸಬೇಕು ಎಂದು ವಾದ ಮಂಡಿಸಿದರು.
‘‘ಸೆಕ್ಷನ್ 121 ಐಪಿಸಿ ಅಡಿಯ ಆರೋಪಗಳನ್ನು ಯಾಸಿನ್ ಮಲಿಕ್ ಒಪ್ಪಿಕೊಂಡಿರುವುದರಿಂದ ಆತನಿಗೆ ಮರಣದಂಡನೆ ವಿಧಿಸುವ ಅವಕಾಶ ಇದೆ. ನಾವು ಕಾರಾಗೃಹದ ಅಧೀಕ್ಷಕರ ಮೂಲಕ ಅವರಿಗೆ ನೋಟಿಸು ನೀಡಿದ್ದೇವೆ’’ ನ್ಯಾಯಾಲಯ ಆದೇಶ ತಿಳಿಸಿದೆ. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಅಪರಾಧಗಳನ್ನು ಎಸಗಿರುವುದು ಸಾಬೀತಾದ ಬಳಿಕ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್‌ಗೆ ಇಲ್ಲಿನ ನ್ಯಾಯಾಲಯ 2022 ಮೇ 24ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.