ವೆಸ್ಟ್ ಬ್ಯಾಂಕ್ ಬಳಿ ಯಹೂದಿ ಧಾರ್ಮಿಕ ಶಾಲೆ ನಿರ್ಮಾಣ: ವರದಿ
ಜೆರುಸಲೇಂ: ಇಸ್ರೇಲ್ ಸರಕಾರವು ಆಕ್ರಮಿತ ವೆಸ್ಟ್ ಬ್ಯಾಂಕ್ ನ ಉತ್ತರ ಭಾಗದಲ್ಲಿ ವಸಾಹುತುಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಬಳಿಕ ಆಕ್ರಮಿತ ಪಶ್ಚಿಮ ದಂಡೆಯ ಹೊರಠಾಣೆಯ ಬಳಿ ಧಾರ್ಮಿಕ ಶಾಲೆಯೊಂದನ್ನು ಇಸ್ರೇಲಿ ವಸಾಹತುಗಾರರು ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ.
2005ರಲ್ಲಿ ಇಸ್ರೇಲ್ ಗಾಝಾಪಟ್ಟಿಯಿಂದ ಹಿಂದಕ್ಕೆ ಸರಿದ ಬಳಿಕ ತೆರವುಗೊಳಿಸಲಾಗಿರುವ ನಾಲ್ಕು ಹೊರಠಾಣೆಗಳಲ್ಲಿ ಒಂದಾಗಿರುವ ಹೊಮೇಶ್ ಪ್ರದೇಶದಲ್ಲಿ ಈ ಶಾಲೆಯನ್ನು ರವಿವಾರ ನಿರ್ಮಿಸಲಾಗಿದೆ. 2005ರಲ್ಲಿ ಈ ಪ್ರದೇಶದಿಂದ ಹಿಂದಕ್ಕೆ ಸರಿದ ಬಳಿಕ ಇಲ್ಲಿಗೆ ಇಸ್ರೇಲಿಯನ್ನರ ಮರುಪ್ರವೇಶವನ್ನು ನಿಷೇಧಿಸುವ ಕಾನೂನನ್ನು ಇಸ್ರೇಲ್ನ ಕಟ್ಟಾ ಬಲಪಂಥೀಯ ಸರಕಾರ ಇತ್ತೀಚೆಗೆ ರದ್ದುಗೊಳಿಸಿದೆ. ಹೊಮೇಶ್ನಲ್ಲಿ ನಿರ್ಮಿಸಲಾಗಿರುವ ಏಕ ಅಂತಸ್ತಿನ ಧಾರ್ಮಿಕ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಸಾಹತುಗಾರರ ಮುಖಂಡರು, ತೆರವುಗೊಳಿಸಲಾಗಿರುವ ಇನ್ನಷ್ಟು ವಸಾಹತುಗಳನ್ನು ಮರುನಿರ್ಮಿಸುವ ವಾಗ್ದಾನ ನೀಡಿದ್ದಾರೆ ಎಂದು ವರದಿಯಾಗಿದೆ.
ಹೊಮೇಶ್ ನಲ್ಲಿ ಧಾರ್ಮಿಕ ಶಾಲೆ ನಿರ್ಮಾಣ ಯೋಜನೆಯನ್ನು ವಿತ್ತಸಚಿವ ಬೆಝಾಲೆಲ್ ಸ್ಮೋಟ್ರಿಚ್ ಮತ್ತು ಭದ್ರತಾ ಸಚಿವ ಯೋವ್ ಗ್ಯಾಲಂಟ್ ಅನುಮೋದಿಸಿದ್ದಾರೆ . ಸರಕಾರದ ಸದಸ್ಯರೂ ಧಾರ್ಮಿಕ ಶಾಲೆ ನಿರ್ಮಾಣವನ್ನು ಸ್ವಾಗತಿಸಿದ್ದಾರೆ ಎಂದು ಇಸ್ರೇಲ್ ಸೇನೆಯ ರೇಡಿಯೊ ವರದಿ ಮಾಡಿದೆ. ಇದೊಂದು ಐತಿಹಾಸಿಕ ಘಳಿಗೆ ಎಂದು ಭದ್ರತಾ ಇಲಾಖೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಈ ಪ್ರದೇಶದಲ್ಲಿ ಇನ್ನಷ್ಟು ವಸಾಹತು ನಿರ್ಮಾಣವು ಸ್ವತಂತ್ರ ಫೆಲೆಸ್ತೀನ್ ದೇಶ ಸ್ಥಾಪನೆಯ ಭರವಸೆಯನ್ನು ಮತ್ತಷ್ಟು ಮಂಕಾಗಿಸಿದ್ದು ಈ ಬೆಳವಣಿಗೆಗೆ ಇಸ್ರೇಲ್ನ ನಿಕಟಮಿತ್ರ ಅಮೆರಿಕವೂ ಆತಂಕ ವ್ಯಕ್ತಪಡಿಸಿದೆ. 2005ರ ಕಾನೂನಿನ ಹೊರತಾಗಿಯೂ ಉತ್ತರ ವೆಸ್ಟ್ ಬ್ಯಾಂಕ್ ನಲ್ಲಿ, ಅದರಲ್ಲೂ ವಿಶೇಷವಾಗಿ ಹೊಮೇಶ್ನಲ್ಲಿ ಇಸ್ರೇಲಿಯನ್ನರ ಹಿಡಿತ ಬಲಗೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವ ವಸಾಹತುಗಾರರು ಈ ಹಿಂದೆ ತೆರವುಗೊಳಿಸಿರುವ ಮನೆಯ ಅಡಿಪಾಯದಲ್ಲಿ ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿದ್ದಾರೆ. ಇಸ್ರೇಲಿ ಸೇನೆ ಈ ಟೆಂಟ್ಗಳನ್ನು ಹಲವು ಬಾರಿ ತೆರವುಗೊಳಿಸಿದ್ದರೂ, ಹೊರಠಾಣೆಯಲ್ಲಿ ವಸಾಹತುಗಾರರ ಉಪಸ್ಥಿತಿಯನ್ನು ಕಡೆಗಣಿಸಿದೆ.