ಶ್ರೀಲಂಕಾ: ಧಾರ್ಮಿಕ ನಿಂದನೆ ವಿರುದ್ಧ ಕಾನೂನು ಜಾರಿಗೆ ನಿರ್ಧಾರ

ಕೊಲಂಬೊ: ಸಾಮಾಜಿಕ ಮಾಧ್ಯಮದಲ್ಲಿ ಧಾರ್ಮಿಕ ನಿಂದನೆ ಮತ್ತು ಟೀಕೆಗಳನ್ನು ನಿಯಂತ್ರಿಸಲು ಹೊಸ ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಶ್ರೀಲಂಕಾದ ಧಾರ್ಮಿಕ ವ್ಯವಹಾರಗಳ ಸಚಿವ ವಿದುರ ವಿಕ್ರಮನಾಯಕ ಹೇಳಿದ್ದಾರೆ.
ಇತ್ತೀಚೆಗೆ ಕಾಮಿಡಿಯನ್ ನತಾಶಾ ಎದಿರಿಸೂರಿಯಾ ಧರ್ಮಗಳನ್ನು ಉಲ್ಲೇಖಿಸಿ ನಿಂದನಾತ್ಮಕ ಹೇಳಿಕೆಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರಕಾರ ಕಠಿಣ ಕಾನೂನು ಜಾರಿಗೆ ನಿರ್ಧರಿಸಿದೆ ಎಂದವರು ಹೇಳಿದ್ದಾರೆ. ತಮ್ಮ ಹೇಳಿಕೆಯ ಬಗ್ಗೆ ನತಾಶಾ ಆ ಬಳಿಕ ಕ್ಷಮೆ ಯಾಚಿಸಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಮತ್ತು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದ ಅವರನ್ನು ರವಿವಾರ ಬಂಧಿಸಲಾಗಿದೆ.
`ಶ್ರೀಲಂಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡುವ ಪ್ರಕರಣ ಹೆಚ್ಚುತ್ತಿದೆ. ಇದನ್ನು ಕಠಿಣ ಕಾನೂನಿನ ಮೂಲಕ ಹತ್ತಿಕ್ಕಬೇಕಾಗಿದೆ' ಎಂದು ಸಚಿವರು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸ್ವಘೋಷಿತ ದೇವಮಾನವ, ಪಾದ್ರಿ ಜೆರೋಮ್ ಫೆರ್ನಾಂಡೊ ಬುದ್ಧನ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಳಿಕ ಈ ಹೇಳಿಕೆಗೆ ಜೆರೋಮ್ ಫೆರ್ನಾಂಡೊ ಕ್ಷಮೆ ಯಾಚಿಸಿದ್ದರೂ ಸಿಂಗಾಪುರಕ್ಕೆ ಪಲಾಯನ ಮಾಡಿ, ತನ್ನ ಸಂಭಾವ್ಯ ಬಂಧನವನ್ನು ತಪ್ಪಿಸಲು ಮೂಲಭೂತ ಹಕ್ಕಿನ ಅರ್ಜಿಯನ್ನು ದಾಖಲಿಸಿದ್ದರು. ಇಂತಹ ಹೇಳಿಕೆಗಳು ದೇಶದಲ್ಲಿ ಧಾರ್ಮಿಕ ಸಂಘರ್ಷಕ್ಕೆ ಆಸ್ಪದ ಮಾಡಬಹುದು ಎಂದು ಹೇಳಿದ್ದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ತಕ್ಷಣ ಈ ಬಗ್ಗೆ ತನಿಖೆ ನಡೆಸುವಂತೆ ಕ್ರಿಮಿನಲ್ ವಿಚಾರಣಾ ವಿಭಾಗಕ್ಕೆ ಆದೇಶ ನೀಡಿದ್ದರು.