ನಿವೃತ್ತಿಯ ನಿರ್ಧಾರವನ್ನು ಇನ್ನೂ 1 ವರ್ಷ ಮುಂದೂಡುವ ಸುಳಿವು ನೀಡಿದ ಎಂ.ಎಸ್. ಧೋನಿ

ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಐದನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಎಂ.ಎಸ್. ಧೋನಿ ಅವರು ತಮ್ಮ ವೃತ್ತಿಜೀವನವನ್ನು ತಕ್ಷಣವೇ ಅಂತ್ಯಗೊಳಿಸದಿರಲು ನಿರ್ಧರಿಸಿದ್ದು, ತನ್ನ ದೇಹವು ಅನುಮತಿಸಿದರೆ ಅಭಿಮಾನಿಗಳಿಗಾಗಿ "ಕನಿಷ್ಠ" ಇನ್ನೊಂದು ಐಪಿಎಲ್ ಋತುವಿಗೆ ಮರಳುವುದಾಗಿ ಪ್ರತಿಜ್ಞೆ ಮಾಡಿದರು.
ಪ್ರಶಸ್ತಿಯನ್ನು ಗೆದ್ದ ನಂತರ ನಿವೃತ್ತಿಯಾಗುವುದು "ಅತ್ಯುತ್ತಮ ಸಮಯ". ಆದರೆ ಮತ್ತೆ ಆಡಲು ಇನ್ನೂ ಒಂಬತ್ತು ತಿಂಗಳ ಕಾಲ ಕೆಲಸ ಮಾಡುವುದು "ಕಠಿಣ" ಆಗಿದ್ದರೂ ಕೂಡ ತನ್ನ ಅಭಿಮಾನಿಗಳಿಗೆ ಮತ್ತೊಂದು "ಉಡುಗೊರೆ" ನೀಡಲು ಬಯಸಿದ್ದೇನೆ ಎಂದು ಧೋನಿ ಹೇಳಿದರು.
"ನೀವು ಸಾಂದರ್ಭಿಕವಾಗಿ ನೋಡಿದರೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯ" ಎಂದು ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದ ನಂತರ ಧೋನಿ ಹೇಳಿದರು.
"ಆದರೆ ಈ ವರ್ಷ ನಾನು ಹೋದಲೆಲ್ಲಾ ನನಗೆ ಬಹಳಷ್ಟು ಪ್ರೀತಿಯನ್ನು ತೋರಿಸಲಾಗಿದೆ, ನನಗೆ ತುಂಬಾ ಸುಲಭವಾದ ವಿಷಯವೆಂದರೆ, 'ತುಂಬಾ ಧನ್ಯವಾದಗಳು' ಎಂದು ಹೇಳುವುದು. ಆದರೆ ಇನ್ನೂ ಒಂಬತ್ತು ತಿಂಗಳು ಕಷ್ಟಪಟ್ಟು ಕೆಲಸ ಮಾಡುವುದು ಹಾಗೂ ಮತ್ತೆ ಐಪಿಎಲ್‌ನ ಕನಿಷ್ಠ ಒಂದು ಸೀಸನ್‌ನಾದರೂ ಆಡುವುದು ನನ್ನ ಮುಂದಿರುವ ಕಠಿಣ ವಿಚಾರವಾಗಿದೆ. ಆದರೆ ನಾನು ಈ ಕುರಿತುನಿರ್ಧರಿಸಲು ಆರು-ಏಳು ತಿಂಗಳುಗಳಿವೆ. ನನ್ನ ಕಡೆಯಿಂದ ಅಭಿಮಾನಿಗಳಿಗೆ ಉಡುಗೊರೆ ಇರುತ್ತದೆ ಎಂದರು.