ಘನತೆಯ ಸ್ಪೀಕರ್ ಹುದ್ದೆ ಸರಕಾರ ಜನವಿರೋಧಿ ಆಗದಂತೆ ನೋಡುವ ಹೊಣೆ

ಈಚಿನ ವರ್ಷಗಳಲ್ಲಿ ಸ್ಪೀಕರ್ ಆಗಿರುವವರು ತಮ್ಮ ಪಕ್ಷದ ಪರವಾಗಿಯೇ ವಾಲುತ್ತಾರೆ ಎಂಬ ಆರೋಪಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬಂದಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ತನಗೆ ಬೇಕಾದಂತೆ ಕಾಯ್ದೆಗಳನ್ನು ಪಾಸ್ ಮಾಡಿಸಲು, ತನಗೆ ಬೇಡದ ಚರ್ಚೆ ಆಗದಂತೆ ತಡೆಯಲು, ವಿರೋಧಿ ಪಾಳಯದ ಸದಸ್ಯರನ್ನು ಅನರ್ಹಗೊಳಿಸಲು ಸ್ಪೀಕರ್ ಹುದ್ದೆಯನ್ನು ದುರ್ಬಳಕೆ ಮಾಡಿರುವ ಪ್ರಕರಣಗಳು ಸಾಕಷ್ಟು ವರದಿಯಾಗಿವೆ. ಕಳೆದ ಸರಕಾರದ ಅವಧಿಯಲ್ಲಿ ಸರಕಾರ ವಿಧಾನ ಪರಿಷತ್‌ನಲ್ಲಿ ಕೃಷಿ ಕಾಯ್ದೆಯನ್ನು ಹೇಗಾದರೂ ಪಾಸ್ ಮಾಡಿಸಲು ಯತ್ನಿಸಿದಾಗ ಅದನ್ನು ತಡೆದಿದ್ದಕ್ಕಾಗಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಕೆಳಗಿಳಿಸಲು ಹೊರಟಿತು ಬಿಜೆಪಿ ಸರಕಾರ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗಿ, ವಿಧಾನಸಭೆ ಸ್ಪೀಕರ್ ಹುದ್ದೆಗೆ ಶಾಸಕ ಯು.ಟಿ ಖಾದರ್ ಅವಿರೋಧ ಆಯ್ಕೆಯಾಗಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಸಮನ್ವಯಕಾರನಂತೆ ಇರುವ ಸ್ಪೀಕರ್ ಹುದ್ದೆಗೆ ಅದರದ್ದೇ ಆದ ಘನತೆಯಿದೆ. ವಿಧಾನಸಭೆಯ ಮುಖ್ಯಸ್ಥರು ಅವರೇ. ಮುಖ್ಯಮಂತ್ರಿ ಸದನದ ನಾಯಕರಾಗಿದ್ದರೂ ಸದನದೊಳಗೆ ಸ್ಪೀಕರ್ ಅವರೇ ಎಲ್ಲರಿಗೂ ಸುಪ್ರೀಂ. ಹಲವು ಬಾರಿ ಅವರ ವಿವೇಚನೆಯೇ ಕಾನೂನು. ಸಂವಿಧಾನವೇ ಆ ಹುದ್ದೆಗೆ ಅಷ್ಟು ಅಧಿಕಾರ ನೀಡಿದೆ. ಹಾಗಾಗಿ ಸ್ಪೀಕರ್ ಬಹಳ ಯೋಚಿಸಿ ಮಾತಾಡಬೇಕಾಗುತ್ತದೆ. ಹಾಗೆಯೇ ತನ್ನನ್ನು ಆಯ್ಕೆ ಮಾಡಿದ ಸರಕಾರ ಸದನದಲ್ಲಿ ಜನವಿರೋಧಿಯಾಗಿ ನಡೆದುಕೊಳ್ಳದಂತೆ ನೋಡಿಕೊಳ್ಳುವುದೂ ಅವರ ಜವಾಬ್ದಾರಿ.
ಆದರೆ, ಸ್ಪೀಕರ್ ಆಗುವುದೆಂದರೆ ರಾಜಕೀಯ ಭವಿಷ್ಯ ಮಸುಕಾದಂತೆ ಎಂಬ ಭಾವನೆಯೂ ರಾಜಕಾರಣದಲ್ಲಿ ಇದೆ. ಪಕ್ಷವೊಂದು ತನ್ನ ಶಾಸಕರೊಬ್ಬರನ್ನು ಸ್ಪೀಕರ್ ಹುದ್ದೆಗೆ ಆರಿಸಿದಾಗ ರಾಜಕೀಯವಾಗಿ ಅವರನ್ನು ಬದಿಗೆ ಸರಿಸುವ ನಾಜೂಕು ತಂತ್ರವೆಂದೂ ಹೇಳಲಾಗುತ್ತದೆ.
ಈಗ ಖಾದರ್ ಅವರನ್ನು ಆ ಹುದ್ದೆಗೆ ಆರಿಸಿರುವುದಕ್ಕೂ ಅವರ ಬೆಂಬಲಿಗರು ಇಂಥದೇ ಬಗೆಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರಾಗಿ ಉತ್ತಮ ಕೆಲಸ ಮಾಡಿದ್ದ, ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ನ ವರ್ಚಸ್ವೀ ನಾಯಕರಾಗಿರುವ ಖಾದರ್ ಅವರನ್ನು ಸ್ಪೀಕರ್ ಸ್ಥಾನದಲ್ಲಿ ಕೂರಿಸಿದ್ದು ಅವರಿಗೆ ರಾಜಕೀಯವಾಗಿ ಮಾಡಿರುವ ಅನ್ಯಾಯ ಎಂಬುದು ಹಲವರ ಬೇಸರ. ಅವರ ಪರ ಲಾಬಿ ಮಾಡಲು ಯಾರೂ ಇಲ್ಲದ ಕಾರಣ ಅವರು ಸಾಫ್ಟ್ ಟಾರ್ಗೆಟ್ ಆದರು ಎಂದೂ ಹೇಳಲಾಗುತ್ತಿದೆ. ವಾಸ್ತವವಾಗಿ ಖಾದರ್ ಅವರ ಹೆಸರನ್ನು ಆ ಹುದ್ದೆಗಾಗಿ ಯೋಚಿಸುವ ಮೊದಲು ಕಾಂಗ್ರೆಸ್ ಹಿರಿಯ ಶಾಸಕರುಗಳಾದ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ತರುವ ಯೋಚನೆಯಲ್ಲಿತ್ತು. ಅದರೆ ಆ ಯಾವ ಹಿರಿಯ ನಾಯಕರೂ ಒಪ್ಪದ ಕಾರಣ ಕಡೆಗೆ ಪಕ್ಷದ ಕಣ್ಣು ಬಂದು ನೆಟ್ಟಿದ್ದು ಖಾದರ್ ಅವರ ಮೇಲೆ.
ಇದೆಲ್ಲ ಏನೇ ಇದ್ದರೂ, ಸಂವಿಧಾನಬದ್ಧ ಹುದ್ದೆಯನ್ನು ಖಾದರ್ ಏರಿದ್ದಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಮುಸ್ಲಿಮ್ ಸಮುದಾಯದ ನಾಯಕರೊಬ್ಬರು ಸ್ಪೀಕರ್ ಆಗಿರು ವುದು ಕೂಡ ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಅತಿ ಮಹತ್ವದ ವಿದ್ಯಮಾನ. ಸ್ಪೀಕರ್ ಹುದ್ದೆ ನಿರ್ವಹಿಸಿ ಆ ಬಳಿಕ ಸಿಎಂ ಆದವರೂ ಇದ್ದಾರೆ. ಅವರು ಗಳೆಂದರೆ,
► ಎಸ್.ಆರ್. ಕಂಠಿ - 1956ರಿಂದ 1962ರವರೆಗೆ ಸ್ಪೀಕರ್ - 1962ರ ಮಾರ್ಚ್‌ನಿಂದ ಜೂನ್‌ವರೆಗೆ ಅಲ್ಪಕಾಲ ಸಿಎಂ
► ಎಸ್.ಎಂ. ಕೃಷ್ಣ - 1989ರಿಂದ 1993ರವರೆಗೆ ಸ್ಪೀಕರ್ - 1999 ಅಕ್ಟೋಬರ್‌ನಿಂದ 2004 ಮೇವರೆಗೆ ಸಿಎಂ
► ಜಗದೀಶ್ ಶೆಟ್ಟರ್ - 2008ರಿಂದ 2009ರವರೆಗೆ ಸ್ಪೀಕರ್ - 2012 ಜುಲೈನಿಂದ 2013 ಮೇವರೆಗೆ ಸಿಎಂ
ಆದರೆ, ಈಚಿನ ಕೆಲ ವರ್ಷಗಳಲ್ಲಿ ಸ್ಪೀಕರ್ ಹುದ್ದೆಗೆ ಹೋಗಲು ಅನೇಕ ರಾಜಕಾರಣಿಗಳು ಹಿಂಜರಿಯುತ್ತಾರೆ. ಕರ್ನಾಟಕದಲ್ಲಿ ಸ್ಪೀಕರ್ ಆಗಿದ್ದ ಬಹುತೇಕ ಎಲ್ಲಾ ನಾಯಕರು ಬಳಿಕ ಚುನಾವಣೆಯಲ್ಲಿ ಸೋತಿದ್ದಾರೆ ಮತ್ತು ಅವರ ರಾಜಕೀಯ ಜೀವನ ಕೊನೆಗೊಂಡಿದೆ ಎಂಬುದು ಇದಕ್ಕೆ ಕಾರಣ.
2004ರಿಂದ ಈ ಹುದ್ದೆಯಲ್ಲಿ ಯಾರೆಲ್ಲಾ ಕುಳಿತಿದ್ದರೋ ಅವರು ತಮ್ಮ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ ಎಂದೇ ಹೇಳಲಾಗುತ್ತದೆ.
► 2004ರಲ್ಲಿ ಸ್ಪೀಕರ್ ಆಗಿದ್ದ ಕೆ.ಆರ್. ಪೇಟೆ ಕೃಷ್ಣ 2008ರ ಚುನಾವಣೆಯಲ್ಲಿ ಸೋತಿದ್ದರು.
► 2013ರಲ್ಲಿ ಸ್ಪೀಕರ್ ಹುದ್ದೆಯಲ್ಲಿದ್ದ ಕಾಗೋಡು ತಿಮ್ಮಪ್ಪ 2018ರ ಚುನಾವಣೆಯಲ್ಲಿ ಸೋತರು.
► 2016ರಲ್ಲಿ ಸ್ಪೀಕರ್ ಆಗಿದ್ದ ಕೆಬಿ ಕೋಳಿವಾಡ 2018ರ ಚುನಾವಣೆ ಮತ್ತು 2019ರ ಉಪಚುನಾವಣೆಯಲ್ಲಿ ಸೋತರು.
► 2018ರಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಕಳೆದ ಚುನಾವಣೆಯಲ್ಲಿ ಸೋತರು.
► ಈ ಸಾಲಿಗೆ ಮೊನ್ನೆಯ ಚುನಾವಣೆಯಲ್ಲಿ ಸೋತ ಜಗದೀಶ ಶೆಟ್ಟರ್, ಕೆ.ಜಿ. ಬೋಪಯ್ಯ ಅವರನ್ನೂ ಸೇರಿಸಲಾಗುತ್ತಿದೆ.
► ಅಲ್ಲದೆ ಕಳೆದ ಬಿಜೆಪಿ ಸರಕಾರದಲ್ಲಿ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಹೀಗಾಗಿ ಈ ಹುದ್ದೆಗೆ ಹೋಗುವ ಬದಲು ಶಾಸಕರಾಗಿಯೇ ಉಳಿಯು ವುದಕ್ಕೆ ಹೆಚ್ಚಿನವರು ಬಯಸುತ್ತಾರೆ ಎನ್ನಲಾಗುತ್ತದೆ. ಅಲ್ಲದೆ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಕೂಡ ಅನೇಕರು ಸ್ಪೀಕರ್ ಹೊಣೆಗಾರಿಕೆ ನಿರಾಕರಿಸಲು ಪ್ರಮುಖ ಕಾರಣ.
ಸ್ಪೀಕರ್ ಹುದ್ದೆಯಲ್ಲಿರುವವರು ತಮ್ಮ ಕ್ಷೇತ್ರಕ್ಕೆ ಹೆಚ್ಚು ಕೆಲಸ ಮಾಡಿಸಲು ಆಗುವುದಿಲ್ಲ ಎಂಬುದು ನಿಜವಲ್ಲ. ಸ್ಪೀಕರ್ ಆದೇಶಕ್ಕೆ ಸಚಿವರು, ಹಿರಿಯ ಅಧಿಕಾರಿಗಳು ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಹಾಗಾಗಿ ಮಾಡಿಸಬಲ್ಲವರಿಗೆ ಬೇಕಾದಷ್ಟು ಕೆಲಸ ಮಾಡಿಸುವ ಧಾರಾಳ ಅವಕಾಶ ಅಲ್ಲಿದೆ.
ಇನ್ನು, ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು ಕೆ.ಎಸ್. ನಾಗರತ್ನಮ್ಮ. 1972ರಿಂದ 1978ರವರೆಗೆ ಅವರು ಸ್ಪೀಕರ್ ಆಗಿದ್ದರು. ಗುಂಡ್ಲುಪೇಟೆಯ ಅವರು ಸುಮಾರು ಎರಡೂವರೆ ದಶಕಗಳ ಕಾಲ ರಾಜಕಾರಣದಲ್ಲಿದ್ದರು. 1985ರಲ್ಲಿ ಪ್ರತಿಪಕ್ಷ ನಾಯಕಿಯಾಗಿದ್ದರು. 1989ರಲ್ಲಿ ಬಂಗಾರಪ್ಪ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ, ನಂತರ ಸ್ಥಳೀಯ ಸಂಸ್ಥೆ ಖಾತೆಯನ್ನು ನಿರ್ವಹಿಸಿದ್ದರು.
ಸ್ಪೀಕರ್ ಹುದ್ದೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದವರಲ್ಲಿ ಒಬ್ಬರೆಂದರೆ ಎರಡು ವರ್ಷಗಳ ಹಿಂದೆ ನಿಧನರಾದ, ಮಂಡ್ಯದ ಗಾಂಧಿ ಎಂದೇ ಮನೆಮಾತಾಗಿದ್ದ ಕೆ.ಆರ್. ಪೇಟೆ ಕೃಷ್ಣ. 2004ರಿಂದ ಸ್ಪೀಕರ್ ಆಗಿ, ಆನಂತರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿಯೂ ಆ ಹುದ್ದೆಯಲ್ಲಿ ಮುಂದುವರಿದಿದ್ದರು. ವಿಧಾನಸಭೆ ಕಲಾಪವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಮೇಷ್ಟ್ರು ಎಂದೇ ಪ್ರಸಿದ್ಧರಾಗಿದ್ದರು.
ಸ್ಪೀಕರ್ ಹುದ್ದೆಗೆ ದೊಡ್ಡ ಕಳಂಕ ಅಂಟಿಸಿದ ಆರೋಪ ಕೆ.ಜಿ. ಬೋಪಯ್ಯ ಅವರ ಮೇಲಿದೆ. 2009ರಿಂದ 2013ರವರೆಗೆ ಅವರು ಸ್ಪೀಕರ್ ಆಗಿದ್ದರು. ಅಕ್ಟೋಬರ್ 2011ರಲ್ಲಿ ಆಡಳಿತಾರೂಢ ಬಿಜೆಪಿಯ 11 ಅತೃಪ್ತ ಶಾಸಕರು ಮತ್ತು ಕೆಲವು ಸ್ವತಂತ್ರ ಶಾಸಕರು ಬಿ.ಎಸ್. ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಂಡೆದ್ದಾಗ ಬಿಜೆಪಿ ಸರಕಾರವನ್ನು ಉಳಿಸುವುದಕ್ಕಾಗಿ ಆ ಎಲ್ಲ ಶಾಸಕರನ್ನು ಸ್ಪೀಕರ್ ಬೋಪಯ್ಯ ಅನರ್ಹಗೊಳಿಸಿದ್ದರು. ಬೋಪಯ್ಯ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದರೂ, ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿ, ಬೋಪಯ್ಯ ನಡೆಗೆ ಛೀಮಾರಿ ಹಾಕಿತ್ತು. ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸ್ಪೀಕರ್ ಒಬ್ಬರು ತಮ್ಮ ಪಕ್ಷದ ನಾಯಕರಿಗಾಗಿ ಆ ಸ್ಥಾನದ ಘನತೆಯನ್ನು ಬಲಿಕೊಟ್ಟು, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡದ್ದು ಬೋಪಯ್ಯ ಕಾಲಾವಧಿಯಲ್ಲಿ ಆಗಿಹೋಯಿತು.
ಇನ್ನು, ಹೆಚ್ಚು ಖಡಕ್ ಆಗಿ ಸ್ಪೀಕರ್ ಹುದ್ದೆಯನ್ನು ನಿರ್ವಹಿಸಿದ್ದವರು ಕೆ.ಆರ್. ರಮೇಶ್ ಕುಮಾರ್. ಸ್ಪೀಕರ್ ಆಗಿ ಅವರು ವಿಧಾನಸಭೆಯನ್ನು ನಡೆಸುವ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ವಿಚಾರ. ಅವರ ಮಾತುಗಾರಿಕೆ ಎಲ್ಲರ ಗಮನ ಸೆಳೆಯುತ್ತದೆ. ಮೊದಲ ಬಾರಿಗೆ ರಮೇಶ್ ಕುಮಾರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದುದು 1994ರಲ್ಲಿ. ಬಳಿಕ ಮೇ 2018ರಿಂದ ಜುಲೈ 2019ರವರೆಗೆ ಮತ್ತೊಮ್ಮೆ ಸ್ಪೀಕರ್ ಹುದ್ದೆಯಲ್ಲಿದ್ದರು. ಅದು ಆಪರೇಷನ್ ಕಮಲ ನಡೆದಿದ್ದ ಸಂದರ್ಭ. ತಮ್ಮ ಖಡಕ್‌ತನವನ್ನು ಅವರು ಆಗ ತೋರಿದ್ದರು. ಪಕ್ಷಾಂತರದ ವಿರುದ್ಧ ಆದೇಶ ಹೊರಡಿಸಿ ಗಮನ ಸೆಳೆದಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಆಪರೇಷನ್ ಕಮಲ ನಡೆದಾಗ 17 ಶಾಸಕರನ್ನು ಅನರ್ಹಗೊಳಿಸಿದ್ದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಹೊಸ ಬಿಜೆಪಿ ಸರಕಾರ ರಚನೆ ಸುಲಭಕ್ಕೆ ಸಾಧ್ಯವಾಗದಂತೆ ಅವರು ತಮ್ಮ ಸ್ಪೀಕರ್ ಅಧಿಕಾರ ಬಳಸಿದ್ದರು. ಶಾಸಕರ ರಾಜೀನಾಮೆ ಪತ್ರಗಳಲ್ಲಿ ಎಂಟನ್ನು ಅವು ಸರಿಯಾದ ಕ್ರಮದಲ್ಲಿಲ್ಲ ಎಂದು ತಿರಸ್ಕರಿಸಿ, ಪುನಃ ರಾಜೀನಾಮೆ ಪತ್ರ ಸಲ್ಲಿಸುವಂತೆ ಸೂಚಿಸಿದ್ದರು. ಕಾನೂನಿನ ಚೌಕಟ್ಟಿನಲ್ಲಿಯೇ ಅವರು ಆ ಸನ್ನಿವೇಶವನ್ನು ಬಹಳ ದಿಟ್ಟತನದಿಂದ ನಿರ್ವಹಿಸಿದ್ದರು.
ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸ್ಪೀಕರ್ ಹುದ್ದೆಯಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ದೊಡ್ಡ ಸುದ್ದಿಯಾದದ್ದು ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಮೂಲಕ. 2019ರ ಅಕ್ಟೋಬರ್‌ನಲ್ಲಿ ವಿಧಾನ ಮಂಡಲ ಅಧಿವೇಶನಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸಿ ಕಾಗೇರಿ ಆದೇಶ ಹೊರಡಿಸಿದ್ದರು. ಸದನದ ಕಾರ್ಯ ಕಲಾಪಗಳನ್ನು ವರದಿ ಮಾಡುವ ವರದಿಗಾರರಿಗೆ ಮಾತ್ರವೇ ಪತ್ರಕರ್ತರ ಗ್ಯಾಲರಿಗೆ ಪ್ರವೇಶಿಸಲು ಅವಕಾಶ ನೀಡಿ, ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾಮನ್ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರುಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ವರದಿಗಾರರು ಸದನದ ಒಳಗೆ ಮೊಬೈಲ್, ಟ್ಯಾಬ್ ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವುದಕ್ಕೂ ಅವಕಾಶ ಇರಲಿಲ್ಲ. ಹಾಗೆ ಸದನದೊಳಕ್ಕೆ ಮಾಧ್ಯಮ ನಿಷೇಧಕ್ಕೆ ಅವರು ಮುನ್ನುಡಿ ಬರೆದರು.
ಸರಕಾರ ರಚನೆ ಸಂದರ್ಭದಲ್ಲಿ ಮಾಧ್ಯಮಗಳ ನಡೆಯನ್ನು ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳನ್ನು ಹಾಡಿಹೊಗಳಿದ್ದ ಬಿಜೆಪಿ ಕಡೆಗೆ ಮಾಧ್ಯಮಗಳನ್ನು ಹೀಗೆ ಕಟ್ಟಿಹಾಕಿತ್ತು.
ಈಚಿನ ವರ್ಷಗಳಲ್ಲಿ ಸ್ಪೀಕರ್ ಆಗಿರುವವರು ತಮ್ಮ ಪಕ್ಷದ ಪರವಾಗಿಯೇ ವಾಲುತ್ತಾರೆ ಎಂಬ ಆರೋಪಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬಂದಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ತನಗೆ ಬೇಕಾದಂತೆ ಕಾಯ್ದೆಗಳನ್ನು ಪಾಸ್ ಮಾಡಿಸಲು, ತನಗೆ ಬೇಡದ ಚರ್ಚೆ ಆಗದಂತೆ ತಡೆಯಲು, ವಿರೋಧಿ ಪಾಳಯದ ಸದಸ್ಯರನ್ನು ಅನರ್ಹಗೊಳಿಸಲು ಸ್ಪೀಕರ್ ಹುದ್ದೆಯನ್ನು ದುರ್ಬಳಕೆ ಮಾಡಿರುವ ಪ್ರಕರಣಗಳು ಸಾಕಷ್ಟು ವರದಿಯಾಗಿವೆ. ಕಳೆದ ಸರಕಾರದ ಅವಧಿಯಲ್ಲಿ ಸರಕಾರ ವಿಧಾನ ಪರಿಷತ್‌ನಲ್ಲಿ ಕೃಷಿ ಕಾಯ್ದೆಯನ್ನು ಹೇಗಾದರೂ ಪಾಸ್ ಮಾಡಿಸಲು ಯತ್ನಿಸಿದಾಗ ಅದನ್ನು ತಡೆದಿದ್ದಕ್ಕಾಗಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಕೆಳಗಿಳಿಸಲು ಹೊರಟಿತು ಬಿಜೆಪಿ ಸರಕಾರ. ಕೊನೆಗೆ ಪರಿಷತ್ ಉಪಸಭಾಪತಿ ನಿಗೂಢವಾಗಿ ಸಾವಿಗೀಡಾದ ಘಟನೆಯೂ ನಡೆಯಿತು.
ಇದೇನೇ ಇದ್ದರೂ, ಸಭಾಧ್ಯಕ್ಷರಾಗಿರುವವರು ಪಕ್ಷಾತೀತರಾಗು ತ್ತಾರೆ. ಅವರು ಎಲ್ಲರ ದನಿಯನ್ನೂ ಆಲಿಸುವುದು ಅಗತ್ಯವಾಗುತ್ತದೆ. ಸ್ಪೀಕರ್ ಸ್ಥಾನ ತಾತ್ವಿಕವಾಗಿ ಅಷ್ಟು ಎತ್ತರದ್ದು ಎಂಬುದನ್ನು ಪ್ರತಿಪಾದಿಸಿ ಕೊಂಡು ಬರಲಾಗಿದೆ. ಸ್ಪೀಕರ್ ಹುದ್ದೆಯಲ್ಲಿರುವವರಿಗೆ ಅಂಥ ಘನತೆ ಯ ಕುರಿತ ಅರಿವು ಮತ್ತು ಎಚ್ಚರ ಯಾವತ್ತೂ ಇರಬೇಕಾಗುತ್ತದೆ.
ಘನತೆಯ ಹುದ್ದೆ
■ ಸ್ಪೀಕರ್ ಹುದ್ದೆಯ ವಿಚಾರವಾಗಿ ರಾಜಕೀಯ ಮಹತ್ವಾಕಾಂಕ್ಷಿಗಳ ನಿಲುವು ಏನೇ ಇದ್ದರೂ, ಅದು ಬಹಳ ಮಹತ್ವದ ಹುದ್ದೆ.
■ ರಾಜ್ಯಪಾಲರ ಬಳಿಕ ರಾಜ್ಯದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅದು.
■ ನಿರ್ಣಾಯಕ ಸಂದರ್ಭದಲ್ಲಿ ಅದು ಮುಖ್ಯಮಂತ್ರಿ, ಪ್ರಧಾನಮಂತ್ರಿ ಸ್ಥಾನಕ್ಕಿಂತಲೂ ಹಿರಿದು.
■ ನಿರ್ದಿಷ್ಟ ಪಕ್ಷದಿಂದ ಆರಿಸಿ ಬಂದಿದ್ದರೂ ಸಂವಿಧಾನಕ್ಕೆ ಬದ್ಧನಾಗಿ ಹುದ್ದೆಯನ್ನು ನಿಭಾಯಿಸಬೇಕಿರುತ್ತದೆ.
■ ಆಡಳಿತ ಮತ್ತು ವಿರೋಧ ಪಕ್ಷದ ಜೊತೆಗೆ ನ್ಯಾಯವನ್ನು ಪಾಲಿಸುವುದು ಮುಖ್ಯವಾಗುತ್ತದೆ.
■ ಎಂಥ ಸನ್ನಿವೇಶದಲ್ಲೂ ಪಕ್ಷಕ್ಕೆ ನಿಷ್ಠನಾಗದೆ ಹುದ್ದೆಯ ಘನತೆ ಉಳಿಸುವ ಹೊಣೆಗಾರಿಕೆ ಸ್ಪೀಕರ್ ಮೇಲಿರುತ್ತದೆ.
■ ಆ ನಿರ್ಲಿಪ್ತತೆ ಪಾಲಿಸಲು ಅಪಾರ ರಾಜಕೀಯ ಅನುಭವ, ಕಾನೂನಿನ ಅರಿವು, ಮುತ್ಸದ್ದಿತನ ಬೇಕು.
■ ಹಾಗಾಗಿಯೇ ಸ್ಪೀಕರ್ ಸ್ಥಾನಕ್ಕೆ ಹಿರಿಯರಾದವರನ್ನೂ ರಾಜಕೀಯ ಅನುಭವವುಳ್ಳವರನ್ನೂ ಆರಿಸುವುದು.