ನಾಳೆಯಿಂದ (ಮೇ 31) ಸರಕಾರಿ ಶಾಲೆಗಳು ಆರಂಭ

ಬೆಂಗಳೂರು: ರಾಜ್ಯಾದ್ಯಂತ ಸರಕಾರಿ ಶಾಲೆಗಳು ನಾಳೆ(ಮೇ 31) ಪ್ರಾರಂಭವಾಗಲಿದ್ದು, ಇದಕ್ಕೆ ಪೂರಕವಾಗಿ ಮೇ 29 ಮತ್ತು 30ರಂದು ಶಾಲೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ಇನ್ನು ಖಾಸಗಿ ಶಾಲೆಗಳು ಮೇ 29ರಿಂದಲೇ ಆರಂಭವಾಗಿವೆ.
ಸರಕಾರದ ಮಾರ್ಗಸೂಚಿಯಂತೆ ಪ್ರಸಕ್ತ ಶೈಕ್ಷಣಿಕ ವರ್ಷವು ಮೇ 31ರಿಂದ ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನಾರಂಭಗೊಳ್ಳಲಿವೆ. 2022-23ನೇ ಸಾಲಿನ ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಎ.11ರಿಂದ ಮೇ 28ರವರೆಗೆ ರಾಜ್ಯಾದ್ಯಂತ ಶಾಲೆಗಳಿಗೆ ಸುಮಾರು ಎರಡು ತಿಂಗಳ ಬೇಸಿಗೆ ರಜೆ ನೀಡಲಾಗಿತ್ತು. ಇದೀಗ ರಜೆ ಮುಕ್ತಾಯಗೊಂಡಿದ್ದು, ತರಗತಿಗಳು ಆರಂಭವಾಗಲಿವೆ.
ಮಂಗಳವಾರ ಮತ್ತು ಬುಧವಾರದಂದು ಪ್ರತಿ ತರಗತಿ ಕೊಠಡಿ, ಅವರಣ, ಆಟದ ಮೈದಾನ, ಲೈಬ್ರರಿ ಸೇರಿದಂತೆ ಇಡೀ ಶಾಲೆಯನ್ನು ಸ್ವಚ್ಛಗೊಳಿಸಲಾಗಿದೆ. ಮಕ್ಕಳು ತರಗತಿಯಲ್ಲಿ ಕೂತು ಪಾಠ ಕೇಳಲು ಆರೋಗ್ಯಕರ ರೀತಿಯಲ್ಲಿ ಶಾಲೆಯನ್ನು ಸಜ್ಜುಗೊಳಿಸಲಾಗಿದೆ.
ನಾಳೆ ಶಾಲೆ ಆರಂಭದ ದಿನವಾದ ಹಿನ್ನೆಲೆ ತಳಿರು-ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂ, ಚಾಕಲೇಟ್ ಅಥವಾ ಇನ್ನೀತರ ಸಿಹಿ ನೀಡಿ ಬರಮಾಡಿಕೊಳ್ಳು ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಒಂದು ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಮೊದಲ ದಿನದಿಂದಲೇ ಹಿಂದಿನ ಸಾಲಿನಲ್ಲಿ ಅರ್ಧಕ್ಕೆ ಶಾಲೆಯಿಂದ ದೂರ ಉಳಿದ ಮಕ್ಕಳು, ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ಹೆರತರಲು ಶಾಲೆಯ ಗ್ರಾಮ ಹಾಗೂ ಸುತ್ತಮುತ್ತಲ ಪ್ರವರಗಳಲ್ಲಿ ಜಾಥಾ ನಡೆಸಿ, ಜಾಗೃತಿ ಮೂಡಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಲಾಗಿದೆ.
ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಜೋರಾಗಿದ್ದು, ಮಳೆಯಿಂದ ಯಾವುದೇ ಶಾಲೆ, ಶಾಲೆಯ ಕೊಠಡಿಗಳು, ಶೌಚಾಲಯ, ಕಾಂಪೌಂಡ್ ಇನ್ನಿತರೆ ಸೌಲಭ್ಯಗಳು ಶಿಥಿಲಗೊಂಡಿದ್ದರೆ ಅಂತಹವುಗಳನ್ನು ಬಳಸಬಾರದು. ಮುಂಜಾಗ್ರತಾ ಕ್ರಮವಾಗಿ ಸಂಬಂಧಿಸಿದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರ ಗಮನಕ್ಕೆ ತಂದು ದುರಸ್ತಿಗೆ ಕ್ರಮ ವಹಿಸಬೇಕು ಎಂದು ಇಲಾಖೆ ಆಯುಕ್ತ ಆರ್.ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ.
ಮಳೆಯಿಂದಾಗಿ ಯಾವುದೇ ಭಾಗದಲ್ಲಿ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿರುವುದು, ರಸ್ತೆಗಳು ಅಪಾಯಕಾರಿ ರೀತಿಯಲ್ಲಿ ಹಾಳಾಗಿ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ.