ಬೆಂಗಳೂರು: ಮಣಿಪುರದ ಕ್ರಿಶ್ಚಿಯನ್ ಸಮುದಾಯದ ಮೇಲಿನ ದಬ್ಬಾಳಿಕೆ ಖಂಡಿಸಿ ಐಸಿಯುಎಫ್ ಪ್ರತಿಭಟನೆ
ಬೆಂಗಳೂರು: ಮಣಿಪುರದ ಕ್ರಿಶ್ಚಿಯನ್ ಸಮುದಾಯದ ಮೇಲೆ ನಡೆಯುತ್ತಿರುವ ಕೊಲೆ, ಸುಲಿಗೆ, ದಬ್ಬಾಳಿಕೆಯನ್ನು ಖಂಡಿಸಿ ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಪೋರಮ್ (ಐಸಿಯುಎಫ್) ಮಂಗಳವಾರ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅಂಥೋನಿ ವಿಕ್ರಮ್, ಒಂದು ತಿಂಗಳಿನಿಂದಲೂ ಮಣಿಪುರದಲ್ಲಿ ಉದ್ವಿಗ್ನತೆ ಮಿತಿ ಮೀರಿದೆ. ಈವರಗೆ ದುಷ್ಕರ್ಮಿಗಳ ದಾಳಿಯಿಂದ 150ಕ್ಕೂ ಹೆಚ್ಚು ಚರ್ಚ್‍ಗಳು ನೆಲಸಮವಾಗಿವೆ. ಸಾವಿರಾರು ಜನರು ಸಾವನ್ನಪ್ಪಿದ್ದಾರೆ. 80ಕ್ಕೂ ಹೆಚ್ಚು ಹಳ್ಳಿಗಳು ಸುಟ್ಟು ಕರಕಲಾಗಿವೆ. ಲಕ್ಷಾಂತರ ಕ್ರಿಶ್ಚಿಯನ್ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿದ್ದರೂ ಇಲ್ಲಿಯವರೆಗೂ ಮಣಿಪುರದ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಈ ದಾಳಿಯ ಹಿಂದೆ ಸರಕಾರವೂ ಶಾಮೀಲಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಆರೋಪಿಸಿದರು.
ಮಣಿಪುರದಲ್ಲಿ ದುಷ್ಕರ್ಮಿಗಳ ವಿನಾಶಕಾರಿ ದಾಳಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕೊಲೆ, ಸುಲಿಗೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಮತ್ತು ಕೇಂದ್ರ ಸಚಿವಾಲಯಗಳು ವಿಫಲವಾಗಿವೆ. ಆದ್ದರಿಂದ ಕೂಡಲೇ ರಾಷ್ಟ್ರಪತಿಗಳು ಮಣಿಪುರದ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಸಂಘಟನೆಯ ಸದಸ್ಯರು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ನೀಡಿದರು.