ದಿಲ್ಲಿಯ ಉ.ಪ್ರ. ಭವನದಲ್ಲಿ ಲೈಂಗಿಕ ಕಿರುಕುಳ ಆರೋಪ: ಹಿಂದುತ್ವವಾದಿ ಸಂಘಟನೆಯ ನಾಯಕನ ಬಂಧನ

ಹೊಸದಿಲ್ಲಿ: ಇಲ್ಲಿನ ಉತ್ತರಪ್ರದೇಶದ ಭವನದ ಆವರಣದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಸ್ವಯಂಘೋಷಿತ ಹಿಂದುತ್ವವಾದಿ ಸಂಘಟನೆಯೊಂದರ ಕಾರ್ಯಕರ್ತನೊಬ್ಬನನ್ನು ದಿಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ರಾಜನಾಥ್ಸಿಂಗ್ ಅವರನ್ನು ಭೇಟಿ ಮಾಡಿಸುವ ನೆಪದಲ್ಲಿ ಆರೋಪಿಯು ಮಹಿಳೆಯನ್ನು ವಿಧಾನಭವನಕ್ಕೆ ಕರೆದುಕೊಂಡು ಬಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ‘ಮಹಾರಾಣಾ ಪ್ರತಾಪ್ ಸೇನಾ’ ಸಂಘಟನೆಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರಮಾರ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ ಗಳಾದ 354 ( ಮಹಿಳೆಯ ಮಾನಕ್ಕೆ ಹಾನಿಯುಂಟು ಮಾಡುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ರೂಪದ ಬಲ ಪ್ರಯೋಗ), 354ಎ (ಲೈಂಗಿಕ ಕಿರುಕುಳ) ಹಾಗೂ 506 (ಕ್ರಿಮಿನಲ್ ಬೆದರಿಕೆ)ಯ ಆರೋಪಗಳನ್ನು ಹೊರಿಸಲಾಗಿದೆ.
ದಿಲ್ಲಿಯಲ್ಲಿ ಉತ್ತರಪ್ರದೇಶ ಸರಕಾರದ ಒಡೆತನದ ಎರಡು ವಸತಿ ಕಟ್ಟಡಗಳಲ್ಲೊಂದಾದ ಯುಪಿ ಭವನ್ ನ ಮೂವರು ಅಧಿಕಾರಿಗಳನ್ನು ಕೂಡಾ ಅಮಾನತುಗೊಳಿಸಲಾಗಿದೆ. ಯುಪಿ ಭವನ್ನಲ್ಲಿ ಆರೋಪಿಗೆ ಕೊಠಡಿಯನ್ನು ಒದಗಿಸಿಕೊಟ್ಟಿದ್ದ ಹೊರಗುತ್ತಿಗೆಯ ನೌಕರನನ್ನು ವಜಾಗೊಳಿಸಲಾಗಿದೆ.
ತನ್ನನ್ನು ನಟಿ, ನರ್ತಕಿ ಹಾಗೂ ಉದ್ಯಮಿಯೆಂಬುದಾಗಿ ಗುರುತಿಸಿಕೊಂಡಿರುವ ದೂರುದಾರ ಮಹಿಳೆಯು ರವಿವಾರ ತಡರಾತ್ರಿ ಘಟನೆ ಬಗ್ಗೆ ಟ್ವೀಟ್ ಮಾಡಿದ್ದರು.ಆರೋಪಿ ಪರಮಾರ್ ತನಗೆ ರಾಜನಾಥ್ ಹಾಗೂ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲು ನೆರವಾಗುವುದಾಗಿ ಹೇಳಿ ಉತ್ತರಪ್ರದೇಶ ಭವನಕ್ಕೆ ಕರೆದುಕೊಂಡು ಬಂದಿದ್ದ ಹಾಗೂ ಅಲ್ಲಿ ಆತ ತನ್ನೊಂದಿಗೆ ಆಕ್ಷೇಪಕಾರಿಯಾಗಿ ವರ್ತಿಸಿದ್ದ ಮತ್ತು ಲೈಂಗಿಕವಾಗಿ ಕಿರುಕುಳ ನೀಡಿದ್ದನೆಂದು ಆರೋಪಿಸಿದ್ದರು.
ಅಲ್ಲದೆ ಆನಂತರ ಆತ ತನ್ನನ್ನು ಚಾಣಕ್ಯಪುರಿ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮಾದಕದ್ರವ್ಯ ಮುಕ್ತ ಭಾರತ ಅಭಿಯಾನಕ್ಕೆ ಕರೆದುಕೊಂಡು ಬಂದಿದ್ದನೆಂದು ಆಕೆ ಹೇಳಿದ್ದಾರೆ. ಅಲ್ಲಿಂದ ತಾನು ತಪ್ಪಿಸಿಕೊಂಡು ಬಂದು, ಪೊಲೀಸರಿಗೆ ದೂರು ನೀಡಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಜನಪ್ರಿಯತೆಯ ಲಾಭಪಡೆದುಕೊಳ್ಳುವ ಉದ್ದೇಶದಿಂದ ಆರೋಪಿಯು ತನ್ನನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದನೆಂದು ಆಕೆ ಹೇಳಿದ್ದಾರೆ.
ಈ ಬಗ್ಗೆ ‘ದಿ ಪ್ರಿಂಟ್’ ಸುದ್ದಿಜಾಲತಾಣವು, ಪರಮಾರ್ನನ್ನು ಸಂಪರ್ಕಿಸಿದಾಗ ಆತ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾನೆ. ತನ್ನ ಹೆಸರಿಗೆ ಕಳಂಕ ಹಚ್ಚುವ ಸಂಚು ಇದಾಗಿದೆಯೆಂದು ಆತ ಆರೋಪಿಸಿದ್ದಾನೆ.