ರಾಜಸ್ಥಾನದಲ್ಲೂ 100 ಯುನಿಟ್ ಉಚಿತ ವಿದ್ಯುತ್
ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಬಜೆಟ್ ಘೋಷಣೆಗೆ ಅನುಗುಣವಾಗಿ ಜೂನ್ 1ರಿಂದ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳು 100 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪ್ರಕಟಿಸಿದೆ. ಇದು ರಾಜ್ಯದ ಗ್ರಿಡ್‌ಗಳಿಗೆ ಸಂಪರ್ಕಿತರಾಗಿರುವ ಒಂದು ಕೋಟಿಗೂ ಅಧಿಕ ಕುಟುಂಗಳಿಗೆ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ಹೊಸ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ 5200 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಉಚಿತ ವಿದ್ಯುತ್ ಯೋಜನೆ ಆಯ್ಕೆ ಮಾಡಿಕೊಳ್ಳದ ಕುಟುಂಬಗಳಿಗೆ ಹಾಲಿ ಇರುವ 300 ರೂಪಾಯಿಯಿಂದ 750 ರೂಪಾಯಿವರೆಗಿನ ಸಬ್ಸಿಡಿಯೂ ಸೇರಿದಂತೆ 7000 ಕೋಟಿ ರೂಪಾಯಿ ಹೊರೆ ಬೀಳುವ ನಿರೀಕ್ಷೆ ಇದೆ. ರಾಜ್ಯದಲ್ಲಿ 1.24 ಕೋಟಿ ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಈ ಪೈಕಿ 1.04 ಕೋಟಿ ಗ್ರಾಹಕರು ಮಾಸಿಕ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುತ್ತಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಬಳಕೆದಾರ ಒಂದಕ್ಕಿಂತ ಹೆಚ್ಚು ಸಂಪರ್ಕವನ್ನು ಹೊಂದಿದ್ದರೆ, ಅವರ ಜನ ಆಧಾರ್ ಕಾರ್ಡ್‌ನಲ್ಲಿ ನೋಂದಾಯಿಸಿರುವ ವ್ಯಕ್ತಿಗಳ ಸಂಖ್ಯೆಯ ಆಧಾರದಲ್ಲಿ ಸೌಲಭ್ಯ ಮಂಜೂರು ಮಾಡಲಾಗುತ್ತದೆ. ಮೂರು ಮಂದಿಯ ಕುಟುಂಬ ಅಷ್ಟೇ ಸಂಖ್ಯೆಯ ಸಂಪರ್ಕ ಹೊಂದಿದ್ದರೆ, ಪ್ರತಿಯೊಬ್ಬರೂ ಉಚಿತ ವಿದ್ಯುತ್ ಕ್ಲೇಮ್ ಮಾಡಬಹುದು" ಎಂದು ಅಧಿಕಾರಿ ವಿವರಿಸಿದ್ದಾರೆ.
ಬಿಲ್ಲಿಂಗ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದೂ ಸೇರಿದಂತೆ ವಿದ್ಯುತ್ ವಿತರಣಾ ಸಂಸ್ಥೆಗಳು ಅಗತ್ಯ ವ್ಯವಸ್ಥೆ ಮಾಡಿಕೊಂಡಿವೆ. ಹಣದುಬ್ಬರ ಪರಿಹಾರ ಶಿಬಿರ ಎಂಬ ಸರ್ಕಾರಿ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡ ಬಳಿಕ ಗ್ರಾಹಕರು ಉಚಿತ ವಿದ್ಯುತ್‌ಗೆ ಅರ್ಹರಾಗುತ್ತಾರೆ ಎನ್ನಲಾಗಿದೆ.