ಭಾರತದ ಪ್ರಮುಖ ಕುಸ್ತಿಪಟುಗಳ ಬಂಧನ, ಅವರನ್ನು ನಡೆಸಿಕೊಂಡ ರೀತಿ ಖಂಡಿಸಿದ ವಿಶ್ವ ಕುಸ್ತಿ ಸಂಸ್ಥೆ

ಹೊಸದಿಲ್ಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಅಗ್ರಮಾನ್ಯ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) ರವಿವಾರ ಹೊಸ ಸಂಸತ್ ಭವನದತ್ತ ಮೆರವಣಿಗೆ ನಡೆಸಿದ್ದ ಕುಸ್ತಿಪಟುಗಳ ಬಂಧನವನ್ನು ಖಂಡಿಸಿ ಹೇಳಿಕೆ ನೀಡಿದೆ.
ಭಾರತದ ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ 'ತನಿಖೆಗಳ ಫಲಿತಾಂಶಗಳ ಕೊರತೆಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿರುವ ವಿಶ್ವ ಕುಸ್ತಿ ಆಡಳಿತ ಮಂಡಳಿಯು 45 ದಿನಗಳಲ್ಲಿ ಅದರ ಚುನಾವಣೆಗಳನ್ನು ನಡೆಸದಿದ್ದರೆ ಫೆಡರೇಶನ್ ಅನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
"ಯುಡಬ್ಲ್ಯೂಡಬ್ಲ್ಯು ಕುಸ್ತಿಪಟುಗಳನ್ನು ನಡೆಸಿಕೊಂಡ ರೀತಿ ಹಾಗೂ ಬಂಧನವನ್ನು ದೃಢವಾಗಿ ಖಂಡಿಸುತ್ತದೆ. ಇದುವರೆಗಿನ ತನಿಖೆಗಳ ಫಲಿತಾಂಶಗಳ ಕೊರತೆಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸುತ್ತದೆ. ಆರೋಪಗಳ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಲು ಯುಡಬ್ಲ್ಯೂಡಬ್ಲ್ಯು ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸುತ್ತದೆ" ಎಂದು ವಿಶ್ವ ಕುಸ್ತಿ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಹಲವಾರು ತಿಂಗಳುಗಳಿಂದ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಭಾರತದಲ್ಲಿನ ಪರಿಸ್ಥಿತಿಯನ್ನು ಬಹಳ ಕಾಳಜಿಯಿಂದ ಅನುಸರಿಸುತ್ತಿದೆ.ಭಾರತದಲ್ಲಿ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರತಿಭಟಿಸುತ್ತಿದ್ದಾರೆ. ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಆರಂಭಿಕ ಹಂತದಲ್ಲಿ ಉಸ್ತುವಾರಿಯಿಂದ ಬದಿಗೆ ಸರಿಸಲಾಗಿದೆ. ಈ ಅವರು ಉಸ್ತುವಾರಿ ವಹಿಸುತ್ತಿಲ್ಲ ಎಂಬುದನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ ” ಎಂದು ಯುಡಬ್ಲ್ಯೂಡಬ್ಲ್ಯು ಹೇಳಿದೆ.