ಸಿದ್ದರಾಮಯ್ಯ ಅವರ ನೂತನ ಸಂಪುಟದಲ್ಲಿ ಮುಸ್ಲಿಮ್ ಸಮುದಾಯಕ್ಕೆ ನಿಜವಾಗಿಯೂ ನ್ಯಾಯಯುತ ಪ್ರಾತಿನಿಧ್ಯ ಸಿಕ್ಕಿದೆಯೆ?

ಬಿಜೆಪಿ ಸರಕಾರದಲ್ಲಿ ಮುಸ್ಲಿಮ್ ಪ್ರಾತಿನಿಧ್ಯದ ಮಾತು ದೂರದ್ದಾಗಿತ್ತು. ಜೆಡಿಎಸ್ ಕೂಡಾ ಅವಕಾಶವಿದ್ದಾಗಲೂ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ಕೊಡದೇ ಇದ್ದ ಪಕ್ಷ. ಕಾಂಗ್ರೆಸ್ ಮಾತ್ರವೇ ಮುಸ್ಲಿಮ್ ಸಮುದಾಯದೊಂದಿಗೆ ನಿಂತಿರುವ ಪಕ್ಷ ಎಂದು ಹೇಳಿಕೊಂಡೇ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಮುಸ್ಲಿಮರು ಕಾಂಗ್ರೆಸ್ ಜೊತೆ ನಿಲ್ಲಲು ಬಹುಮುಖ್ಯ ಕಾರಣ ಸಿದ್ದರಾಮಯ್ಯ.
ಸಾಮಾಜಿಕ ನ್ಯಾಯದ ವಿಚಾರದಲ್ಲಿ ತುಂಬ ಬದ್ಧತೆಯುಳ್ಳ ನಾಯಕರಾದ ಸಿದ್ದರಾಮಯ್ಯ ಸಂಪುಟದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಏನು ಸಿಕ್ಕಿತು ಎಂಬುದು ಒಮ್ಮೆ ಕಣ್ಣು ಹೊರಳಿಸಿ ನೋಡಲೇಬೇಕಾದ ಸಂಗತಿಯಾಗುತ್ತದೆ.
ಮೊತ್ತಮೊದಲು ಇದು ಸಿದ್ದರಾಮಯ್ಯನವರ ಸಂಪುಟ ಎಂಬುದು ಇಲ್ಲಿ ಬಹಳ ಮುಖ್ಯ.
ಯಾಕೆಂದರೆ, ಬಿಜೆಪಿ ಸರಕಾರದಲ್ಲಿ ಮುಸ್ಲಿಮ್ ಪ್ರಾತಿನಿಧ್ಯದ ಮಾತು ದೂರದ್ದಾಗಿತ್ತು. ಜೆಡಿಎಸ್ ಕೂಡಾ ಅವಕಾಶವಿದ್ದಾಗಲೂ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ಕೊಡದೇ ಇದ್ದ ಪಕ್ಷ. ಕಾಂಗ್ರೆಸ್ ಮಾತ್ರವೇ ಮುಸ್ಲಿಮ್ ಸಮುದಾಯದೊಂದಿಗೆ ನಿಂತಿರುವ ಪಕ್ಷ ಎಂದು ಹೇಳಿಕೊಂಡೇ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಮುಸ್ಲಿಮರು ಕಾಂಗ್ರೆಸ್ ಜೊತೆ ನಿಲ್ಲಲು ಬಹುಮುಖ್ಯ ಕಾರಣ ಸಿದ್ದರಾಮಯ್ಯ.
ಸಾಮಾಜಿಕ ನ್ಯಾಯದ ವಿಚಾರದಲ್ಲಿ ತುಂಬ ಬದ್ಧತೆಯುಳ್ಳ ನಾಯಕರಾದ ಸಿದ್ದರಾಮಯ್ಯ ಸಂಪುಟದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಏನು ಸಿಕ್ಕಿತು ಎಂಬುದು ಒಮ್ಮೆ ಕಣ್ಣು ಹೊರಳಿಸಿ ನೋಡಲೇಬೇಕಾದ ಸಂಗತಿಯಾಗುತ್ತದೆ.
ಈ ಸಲದ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯ ಹೆಚ್ಚು ಕಡಿಮೆ ಪೂರ್ತಿಯಾಗಿ ಕಾಂಗ್ರೆಸ್ ಗೆಲುವಿಗೆ ಟೊಂಕ ಕಟ್ಟಿ ನಿಂತಂತೆ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದೆ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ - ಈ ಎರಡೂ ಪಕ್ಷಗಳ ಅವಕೃಪೆಗೆ ಪಾತ್ರವಾಗಿದೆ. ಆದರೆ ಆ ಸಮುದಾಯ ಹಾಕಿದ ಮತದ ಪ್ರಮಾಣಕ್ಕೆ ತಕ್ಕಂತೆ ಈ ಸರಕಾರದಲ್ಲಿ ಪ್ರಾತಿನಿಧ್ಯ ಪಡೆದಿದೆಯೇ?
ಈ ಪ್ರಶ್ನೆಯನ್ನು ಕೇಳಿಕೊಂಡರೆ ಆಗುವುದು ನಿರಾಸೆ ಮಾತ್ರ.
ಕಾಂಗ್ರೆಸ್ಗೆ ಬಂದಿರುವ ಮತಗಳಲ್ಲಿ ಶೇ. 25ರಷ್ಟು ಮತಗಳು ಮುಸ್ಲಿಮ್ ಸಮುದಾಯದ ಮತಗಳೇ ಆಗಿವೆ. ಕನಿಷ್ಠ ಶೇ. 88ರಷ್ಟು ಮುಸ್ಲಿಮರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಆದರೆ ಈ ಬೆಂಬಲಕ್ಕೆ ಹೋಲಿಸಿದರೆ ಅವರಿಗೆ ಈ ಸರಕಾರದಲ್ಲಿ ಸಿಕ್ಕಿರುವ ಪ್ರಾತಿನಿಧ್ಯ ಹೆಸರಿಗೆ ಮಾತ್ರ.
ಈ ಸಲ ಯಾವ ಸಮುದಾಯದಿಂದ ಎಷ್ಟು ಮತಗಳು ಕಾಂಗ್ರೆಸ್ಗೆ ಬಂದವು ಎಂಬುದನ್ನು ಮೊದಲು ನೋಡಿ.
ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಲೆಕ್ಕಾಚಾರದ ಪ್ರಕಾರ,
ಎಸ್ಟಿ ಸಮುದಾಯದ ಶೇ. 44ರಷ್ಟು ಮತಗಳು
ಎಸ್ಸಿ ಸಮುದಾಯದ ಶೇ. 60ರಷ್ಟು ಮತಗಳು
ಕುರುಬ ಸಮುದಾಯದ ಶೇ. 63 ಮತಗಳು
ಮುಸ್ಲಿಮ್ ಸಮುದಾಯದ ಶೇ. 88 ಮತಗಳು
ಒಕ್ಕಲಿಗ ಸಮುದಾಯದ ಶೇ. 24 ಮತಗಳು
ಇತರ ಹಿಂದುಳಿದ ವರ್ಗದ ಶೇ. 31 ಮತಗಳು
ಲಿಂಗಾಯತ ಸಮುದಾಯದ ಶೇ. 20 ಮತಗಳು
ಅಂದರೆ ಅತಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ಗೆ ಮತ ಹಾಕಿರುವವರು ಮುಸ್ಲಿಮರು. ಸಿದ್ದರಾಮಯ್ಯನವರೇ ಸಿಎಂ ಆಗಲಿದ್ದಾರೆ ಎಂಬುದು ಬಹುತೇಕ ಖಾತ್ರಿಯಿದ್ದೂ ಕುರುಬ ಸಮುದಾಯದವರ ಮತಗಳು ಕಾಂಗ್ರೆಸ್ಗೆ ಬಂದಿರುವುದು ಮುಸ್ಲಿಮ್ ಸಮುದಾಯಕ್ಕೆ ಹೋಲಿಸಿದರೆ ಬಹಳ ಕಡಿಮೆ. ಯಾಕೆಂದರೆ ಕುರುಬ ಸಮುದಾಯದ ಸುಮಾರು ಶೇ. 22ರಷ್ಟು ವೋಟುಗಳು ಬಿಜೆಪಿಗೆ ಹೋಗಿವೆ. ಆದರೆ ಮುಸ್ಲಿಮ್ ಸಮುದಾಯದ ಕೇವಲ ಶೇ. 2ರಷ್ಟು ಮತಗಳು ಮಾತ್ರವೇ ಬಿಜೆಪಿಯ ಪಾಲಾಗಿರುವುದು.
ಇನ್ನು ಕಾಂಗ್ರೆಸ್ಗೆ ಬಂದಿರುವ ಒಟ್ಟು ಮತಗಳಲ್ಲಿ
ಒಕ್ಕಲಿಗ ಸಮುದಾಯದ ಮತಗಳ ಪಾಲು ಶೇ.24
ಮುಸ್ಲಿಮ್ ಸಮುದಾಯದ ಮತಗಳ ಪಾಲು ಶೇ.88
ಲಿಂಗಾಯತ ಸಮುದಾಯದ ಮತಗಳ ಪಾಲು ಕೇವಲ ಶೇ.20.
ಕಾಂಗ್ರೆಸ್ ಪಕ್ಷ ಪಡೆದ ಒಟ್ಟು ಮತಗಳಲ್ಲಿ ಶೇ 25.ರಷ್ಟು ಮತಗಳು ಕೇವಲ ಮುಸ್ಲಿಮ್ ಸಮುದಾಯದಿಂದ ಬಂದಿದೆ.
ಆದರೆ ಸಿದ್ದರಾಮಯ್ಯ ಸಂಪುಟದಲ್ಲಿ ಸಿಕ್ಕಿರುವ ಪ್ರಾತಿನಿಧ್ಯ ಗಮನಿಸಿ.
ಲಿಂಗಾಯತ ಸಮುದಾಯ 9 ಸಚಿವರು,
ಒಕ್ಕಲಿಗ ಸಮುದಾಯ 5 ಸಚಿವರು,
ಪರಿಶಿಷ್ಟ ಜಾತಿ(ಬಲ) 3 ಸಚಿವರು,
ಪರಿಶಿಷ್ಟ ಜಾತಿ(ಎಡ) 2 ಸಚಿವರು. ಅಲ್ಲದೆ, ಒಬ್ಬರು ಭೋವಿ ಸಮಾಜದಿಂದ ಸಚಿವರಾಗಿದ್ದಾರೆ,
ಪರಿಶಿಷ್ಟ ಪಂಗಡ - 3 ಸಚಿವರು,
ಮುಸ್ಲಿಮ್ ಸಮುದಾಯ -2 ಸಚಿವರು,
ಈ ಪೈಕಿ ಮುಸ್ಲಿಮ್ ಸಮುದಾಯ ಹೊರತುಪಡಿಸಿ ಉಳಿದ ಎಲ್ಲ ಸಮುದಾಯದವರು ಜೆಡಿಎಸ್ ಅಧಿಕಾರದಲ್ಲಿದ್ದರೂ ಸಚಿವರಾಗುತ್ತಾರೆ, ಬಿಜೆಪಿ ಅಧಿಕಾರದಲ್ಲಿದ್ದರೂ ಸಚಿವ ಸ್ಥಾನ ಪಡೆಯುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಸಚಿವರಾಗುತ್ತಾರೆ. ಅವರಲ್ಲಿಯೇ ಮುಖ್ಯಮಂತ್ರಿಗಳಾಗುತ್ತಾರೆ, ಉಪಮುಖ್ಯಮಂತ್ರಿಗಳಾಗುತ್ತಾರೆ.
ಆದರೆ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅತ್ಯಂತ ಕಡಿಮೆ ಪ್ರಾತಿನಿಧ್ಯ ಸಿಗುವುದು ಮುಸ್ಲಿಮರಿಗೆ ಮಾತ್ರ ಅಥವಾ ಪ್ರಾತಿನಿಧ್ಯವೇ ಇಲ್ಲದ ಸ್ಥಿತಿ.
ಈ ಪ್ರಾತಿನಿಧ್ಯದ ತೀವ್ರ ಕೊರತೆ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡುವಲ್ಲಿಂದಲೇ ಶುರುವಾಗುತ್ತದೆ.
ಕಳೆದ 20 ವರ್ಷಗಳಲ್ಲಿ ಮುಸ್ಲಿಮ್ರಿಗೆ ಬಿಜೆಪಿಯಂಥ ರಾಜಕೀಯ ಪಕ್ಷ ಟಿಕೆಟ್ ಕೊಡುವ ವಿಚಾರ ಬದಿಗಿರಲಿ, ಕಾಂಗ್ರೆಸ್ ಪಕ್ಷ ನೀಡುವ ಟಿಕೆಟ್ ಪ್ರಮಾಣವೇ ತಗ್ಗುತ್ತ ಬಂದಿದೆ.
2008ರಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷ 22 ಸ್ಥಾನಗಳಲ್ಲಿ ಟಿಕೆಟ್ ನೀಡಿತ್ತು.
2013ರಲ್ಲಿ ಅದು 19ಕ್ಕೆ ಇಳಿಯಿತು.
2018ರಲ್ಲಿ 17ಕ್ಕೆ ಬಂತು.
ಈ ಸಲವಂತೂ ಕೇವಲ 15 ಕಡೆ ಮಾತ್ರ ಮುಸ್ಲಿಮ್ರಿಗೆ ಟಿಕೆಟ್ ನೀಡಲಾಯಿತು.
1952ರಿಂದ ಚುನಾವಣಾ ಇತಿಹಾಸ ನೋಡಿಕೊಂಡರೆ ಪ್ರತೀ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಜಿಲ್ಲೆಗಳಲ್ಲೇ ಕನಿಷ್ಠ ಮೂವರು ಮುಸ್ಲಿಮ್ ಶಾಸಕರು, ಪ್ರತೀ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ಮೂವರು ಮುಸ್ಲಿಮ್ ಸಂಸದರು ಇರುತ್ತಿದ್ದರು ಹಾಗೂ ಕಾಂಗ್ರೆಸ್ ಪಕ್ಷದ ಮತ್ತು ಜನತಾದಳ ಪಕ್ಷದಿಂದ ಕಡ್ಡಾಯವಾಗಿ ಕೇಂದ್ರದಲ್ಲಿ ಸಚಿವರಿರುತ್ತಿದ್ದರು. ಆದರೆ ಈಗ ಮುಸ್ಲಿಮ್ ಸಮುದಾಯದವರಿಗೆ ವಿಧಾನಸಭಾ, ಲೋಕಸಭಾ ಟಿಕೆಟ್ ಸಿಗುವುದೇ ಕಷ್ಟವಾಗಿದೆ.
ಈ ಸಲ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡುವಾಗಲೂ ಇದೇ ರೀತಿ ಮುಸ್ಲಿಮ್ ಸೀಟುಗಳನ್ನು ಅಳೆದು ತೂಗಿ ತೀರಾ ಕೊನೆಗೆ ಅಂತಿಮಗೊಳಿಸಲಾಯಿತು. ಅಭ್ಯರ್ಥಿಗಳು ಸಮರ್ಪಕವಾಗಿ ಪ್ರಚಾರ ಮಾಡುವುದಕ್ಕೇ ಆಗದ ಹಾಗಾಯಿತು.
ಉದಾಹರಣೆಗೆ, ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ತೀರಾ ಕೊನೆಯ ಕ್ಷಣದಲ್ಲಿ ನೀಡಲಾಯಿತು. ಆ ಅಭ್ಯರ್ಥಿ ಸೋತರು.
ರಾಯಚೂರು ನಗರ ಕ್ಷೇತ್ರದ ಟಿಕೆಟ್ ಕೊನೆಯ ದಿನ ರಾತ್ರಿ ಘೋಷಿಸಲಾಯಿತು. ಅಲ್ಲಿ ಸೋಲಾಯಿತು.
ಶಿಗ್ಗಾಂವ ಕ್ಷೇತ್ರದಲ್ಲಿ ಮೊದಲು ಒಬ್ಬರನ್ನು ಘೋಷಿಸಿ ನಂತರ ಬದಲಿಸಲಾಯಿತು. ಅವರೂ ಸೋತರು.
ಇದು ಉದ್ದೇಶಪೂರ್ವಕವೊ, ಕಾಕತಾಳೀಯವೋ ಗೊತ್ತಿಲ್ಲ. ಆದರೆ ಬಹುತೇಕ ಮುಸ್ಲಿಮ್ ಅಭ್ಯರ್ಥಿಗಳ ವಿಚಾರದಲ್ಲಿ ಹೀಗೆಯೇ ಆಗುತ್ತಿದೆ.
ಇನ್ನು ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ಆ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವುದು ತಮ್ಮ ಹೊಣೆ ಎಂದು ಭಾವಿಸುವುದಿಲ್ಲ ಎಂಬ ಆರೋಪವೂ ಇದೆ. ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಲಾಗಿದೆ ಎಂದರೆ ಗೆದ್ದುಬರುವುದು ಆ ಅಭ್ಯರ್ಥಿಯ ಹೊಣೆ ಎಂಬ ಮನೋಭಾವ ತೋರಿಸುವ ಕಾಂಗ್ರೆಸ್ ಕಾರ್ಯಕರ್ತರ ಪ್ರವೃತ್ತಿ ಬದಲಾಗಬೇಕಿದೆ ಎನ್ನುತ್ತಾರೆ ವಿಶ್ಲೇಷಕರು.
ಇನ್ನು ಕಣಕ್ಕಿಳಿಸಲಾಗುವ ಮುಸ್ಲಿಮ್ ಅಭ್ಯರ್ಥಿಗಳ ಪ್ರಮಾಣ ಕ್ಷೀಣಿಸುತ್ತಿರುವುದಕ್ಕೂ ಕಾರಣವಿದೆ.
ಒಕ್ಕಲಿಗರಲ್ಲಾದರೆ ಎಷ್ಟು ಕ್ಷೇತ್ರಗಳಲ್ಲಿ ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಡಿ.ಕೆ. ಶಿವಕುಮಾರ್ ಲಾಬಿ ಮಾಡುತ್ತಾರೆ.
ಲಿಂಗಾಯತರಲ್ಲಾದರೆ ಶಾಮನೂರು ಅಂಥ ನಾಯಕರು ತಮಗಿಷ್ಟು ಸೀಟುಗಳು ಬೇಕೆಂದು ದಿಲ್ಲಿ ಮಟ್ಟದಲ್ಲಿ ತಾಕೀತು ಮಾಡುತ್ತಾರೆ. ಆದರೆ ಮುಸ್ಲಿಮರಲ್ಲಿ ಅಂಥ ಪಟ್ಟು ಹಿಡಿದು ಪಡೆಯುವ ನಾಯಕತ್ವದ ಕೊರತೆ ಎದ್ದು ಕಾಣುತ್ತದೆ.
ಫಲಿತಾಂಶದ ನಂತರ ಸಂಪುಟ ರಚನೆ ಹೊತ್ತಿನಲ್ಲಿಯೂ ಇದೇ ಥರದ ಲಾಬಿ ಕೆಲಸ ಮಾಡುತ್ತದೆ.
ಆಗಲೂ ಮುಸ್ಲಿಮ್ರ ಪರ ಪಟ್ಟು ಹಿಡಿಯಲು ಸಮುದಾಯದಲ್ಲಿ ಗಟ್ಟಿ ನಾಯಕರಿಲ್ಲ.
ಇನ್ನು ಯಾವ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸ ಬೇಕೆಂಬುದನ್ನೂ ಬೇರೆ ಪ್ರಭಾವಿ ನಾಯಕರೇ ನಿರ್ಧರಿಸುತ್ತಾರೆಯೇ ಹೊರತು ಮುಸ್ಲಿಮ್ ಸಮುದಾಯ ದೊಳಗೇ ತಮ್ಮ ಸಮಾಜದ ಅಭ್ಯರ್ಥಿ ಇಂಥವರಾಗಬೇಕೆಂದು ಕೇಳುವ ಮಟ್ಟದಲ್ಲಿ ಯಾವ ನಾಯಕರೂ ಇಲ್ಲ.
ಹಾಗಾಗಿ ವಿಜಯಪುರದಲ್ಲಿ ಎಂ.ಬಿ. ಪಾಟೀಲ್ ಥರದ ನಾಯಕರು, ಬೀದರ್ನಲ್ಲಿ ಈಶ್ವರ ಖಂಡ್ರೆಯಂಥ ನಾಯಕರು, ರಾಮನಗರದಲ್ಲಾದರೆ ಡಿ.ಕೆ. ಶಿವಕುಮಾರ್ ಯಾವ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಎಂಬುದನ್ನು ಹೇಳುತ್ತಾರೆ. ಹೀಗೆ ತಮ್ಮ ನಾಯಕನನ್ನು ತಾವೇ ಆರಿಸಿಕೊಳ್ಳುವ ಅವಕಾಶ ಮುಸ್ಲಿಮ್ ಸಮುದಾಯಕ್ಕೆ ಇಲ್ಲವಾಗಿದೆ. ಕಾರಣವಿಷ್ಟೆ, ದೊಡ್ಡ ಮಟ್ಟದಲ್ಲಿ ಇರುವ ಪ್ರಭಾವಿ ನಾಯಕತ್ವದ ಕೊರತೆ.
ಇನ್ನು ಕಾಂಗ್ರೆಸ್ ಟಿಕೆಟ್ ಕೊಡುವ ಹೆಚ್ಚಿನ ಮುಸ್ಲಿಮ್ ಅಭ್ಯರ್ಥಿಗಳು ಸ್ವತಂತ್ರ ನಿಲುವು, ವರ್ಚಸ್ಸು ಬೆಳೆಸಿಕೊಳ್ಳದೆ ಪಕ್ಷದ ಪ್ರಭಾವಿ ನಾಯಕರ ಸೂತ್ರದ ಗೊಂಬೆಯಾಗುವಂತವರೇ ಹೆಚ್ಚಿರುತ್ತಾರೆ. ಅದು ಕಾಕತಾಳೀಯವೋ, ಲೆಕ್ಕಾಚಾರದ ನಡೆಯೋ, ಕಾಂಗ್ರೆಸೇ ಹೇಳಬೇಕು.
ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮ್ ಸಮುದಾಯದಿಂದ ಬಂದ ಹಿರಿಯ, ಅನುಭವಿ ನಾಯಕರಾದ ಮಾಜಿ ಸಚಿವ ನಸೀರ್ ಅಹ್ಮದ್, ಸಲೀಂ ಅಹ್ಮದ್ ಅಂಥವರು ಇದ್ದರೂ ಪರಿಗಣಿಸಲೇ ಇಲ್ಲ.
ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ತನ್ವೀರ್ ಸೇಠ್, ಐದನೇ ಬಾರಿಗೆ ಶಾಸಕರಾದ ಎನ್.ಎ. ಹಾರೀಸ್, ಯುವನಾಯಕ ರಿಝ್ವಾನ್ ಅರ್ಷದ್, ಏಕೈಕ ಮುಸ್ಲಿಮ್ ಮಹಿಳೆ ಶ್ರೀಮತಿ ಖನೀಜ್ ಫಾತಿಮಾ ಅಂತಹ ಪ್ರಬುದ್ಧ ಶಾಸಕರು ಇದ್ದರೂ ಕಾಂಗ್ರೆಸ್ ಪರಿಗಣಿಸದೆ ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕ ವಿಧಾನಸಭಾ ಅಧ್ಯಕ್ಷರ ಹುದ್ದೆಗೆ ಮುಸ್ಲಿಮ್ ಸಮುದಾಯದ ಪ್ರಭಾವಿ ಮುಖಂಡ ಯು.ಟಿ. ಖಾದರ್ ಅವರನ್ನು ಕೂರಿಸಲಾಗಿದೆ. ಈಗ ರಾಜ್ಯದಲ್ಲಿ ಎಲ್ಲಾ ಸಮುದಾಯಗಳು ಒಪ್ಪಿಕೊಳ್ಳುವಂತಹ ಕೆಲವೇ ಕೆಲವು ಮುಸ್ಲಿಮ್ ನಾಯಕರಲ್ಲಿ ಯು.ಟಿ. ಖಾದರ್ ಒಬ್ಬರು. ಅವರು ಈ ಹಿಂದೆ ಕೊಟ್ಟ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈಗ ರಾಜ್ಯ ನಾಯಕರಾಗಿ ಬೆಳೆಯುವ ಹಂತದಲ್ಲಿ ಹೀಗೆ ಸಾಂವಿಧಾನಿಕ ಹುದ್ದೆ ನೀಡಿ ಬದಿಗೆ ಸರಿಸಲಾಯಿತೆ ಎಂಬ ಪ್ರಶ್ನೆಯೂ ಎದ್ದಿದೆ.
ಮುಸ್ಲಿಮ್ ಸಮುದಾಯದವರಿಗೆ ಕೊಟ್ಟಿರುವ ಖಾತೆಗಳೂ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ, ಪೌರಾಡಳಿತ, ಹಜ್ ಇಂಥವು ಮಾತ್ರ. ಇನ್ನು ನಿಗಮ ಮಂಡಳಿಗಳಲ್ಲಿ ಇನ್ನಾರಿಗಾದರೂ ಸ್ಥಾನ ಕಲ್ಪಿಸಿದರೂ ಅಲ್ಲಿಯೂ ಇಂಥದೇ ಯಾವುದನ್ನಾದರೂ ಕೊಡಲಾಗುತ್ತದೆ, ಅಷ್ಟೆ. ಅಲ್ಲಿಗೆ ಪ್ರಾತಿನಿಧ್ಯದ ಹೆಸರಿನ ಹಂಚಿಕೆ ಮುಗಿದುಬಿಡುತ್ತದೆ.
ಆದರೆ ಅಂಥ ತೋರಿಕೆಯ ಪ್ರಾತಿನಿಧ್ಯದಿಂದ ಆ ಸಮುದಾಯಕ್ಕೇನಾದರೂ ಲಾಭವಾಯಿತೆ ಎಂಬುದು ಗೌಣವಾಗಿಬಿಡುತ್ತದೆ.
ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಕೊನೆಗೆ ಮುಸ್ಲಿಮರು ಮಾತ್ರ ಅವಕಾಶ ವಂಚಿತರಾಗುವುದು, ಶೋಷಿತರಾಗುವುದು, ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಲ್ಪಡುವುದು ತಪ್ಪುವುದಿಲ್ಲ ಎನ್ನುವುದು ಖಾತ್ರಿಯಾಗಿದೆ ಎಂಬ ಬೇಸರ ಆ ಸಮುದಾಯದಲ್ಲಿ ವ್ಯಕ್ತವಾಗಿದೆ.
ಜಾತ್ಯತೀತ ತತ್ವದ ಆಧಾರದಲ್ಲಿ ಪ್ರತೀ ಸಲವೂ ಮುಸ್ಲಿಮರು ಅಧಿಕಾರ ತ್ಯಾಗ ಮಾಡುವುದು ತಪ್ಪುವುದಿಲ್ಲ. ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು, ಹೋರಾಟಗಾರರು ಪ್ರತೀ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್ಗೇ ಮತ ನೀಡಬೇಕೆಂದು ಪ್ರತಿಪಾದಿಸುತ್ತಾರೆ. ಬಲವಾಗಿ ಆಗ್ರಹಿಸುತ್ತಾರೆ.
ಆದರೆ ಇದೇ ಜನ ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಮುಸ್ಲಿಮ್ ಸಮಾಜಕ್ಕೂ ನ್ಯಾಯ ಒದಗಿಸಿಕೊಡಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಬುದ್ಧಿ ಹೇಳುವುದಿಲ್ಲ ಎಂದು ಕೇಳುತ್ತಿದ್ದಾರೆ ಮುಸ್ಲಿಮ್ ಸಮುದಾಯದ ಜನ.
ಅದೇ ರೀತಿ ಅನ್ಯಾಯಕ್ಕೊಳಗಾದ ಇನ್ನೊಂದು ವರ್ಗ ರಾಜ್ಯದ ಮಹಿಳೆಯರು. ಮತದಾರರ ಅರ್ಧದಷ್ಟು ಇರುವವರು ಮಹಿಳೆಯರು. ಈ ಬಾರಿ ಮಹಿಳೆಯರು ದೊಡ್ಡ ಮಟ್ಟದಲ್ಲೇ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಆದರೆ 34 ಜನರ ಸಂಪುಟದಲ್ಲಿರುವುದು ಏಕೈಕ ಮಹಿಳೆ. ಇದ್ಯಾವ ನ್ಯಾಯ ಸ್ವಾಮೀ? ತೀರಾ ಕಡಿಮೆ ಅಂದರೂ ಮೂವರು ಸಚಿವರಾದರೂ ಮಹಿಳೆಯರು ಇರಬೇಕಿತ್ತಲ್ಲವೇ?
ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲಿಗೆ ಮುಸ್ಲಿಮ್ ಮತದಾರರೇ ಕಾರಣವೆಂದು ಸ್ವತಃ ಕುಮಾರಸ್ವಾಮಿ ಆರೋಪಿಸಿದ್ದಾರೆ. ಬಿಜೆಪಿಯ ನಾಯಕರು ತಮ್ಮ ಸೋಲಿಗೆ ಮುಸ್ಲಿಮ್ ಮತದಾರರೇ ಕಾರಣವೆಂದು ಬಹಿರಂಗವಾಗಿ ಬೆದರಿಕೆ ಹಾಕಿರುವ ಪ್ರಕರಣಗಳು ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿವೆ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಸಮುದಾಯದ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲಬೇಕಾದದ್ದು ಆ ಪಕ್ಷದ ಜವಾಬ್ದಾರಿ ಮತ್ತು ಕರ್ತವ್ಯ. ಆದರೆ, ಬಿಜೆಪಿಯನ್ನು ತೋರಿಸಿ ಮುಸ್ಲಿಮರನ್ನು ಹೆದರಿಸುವ ಕಾಂಗ್ರೆಸ್, ಆ ಸಮುದಾಯವನ್ನು ಒಂದೇ ಪಕ್ಷಕ್ಕೆ ಮತ ಹಾಕುವ ರೀತಿ ಬಳಸಿಕೊಂಡು, ಗೆದ್ದ ನಂತರ ಮೂಲೆಗುಂಪು ಮಾಡಿತೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗುತ್ತಿದೆ.
ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪತ್ನಿಗೆ ಬಿಜೆಪಿ ಸರಕಾರ ನೀಡಿದ್ದ ತಾತ್ಕಾಲಿಕ ಉದ್ಯೋಗ ಕಳಕೊಂಡಿದ್ದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಉದ್ಯೋಗ ಕೊಡುತ್ತೇವೆ ಎಂದರು. ಒಳ್ಳೆಯ ವಿಷಯ. ಆದರೆ ಪ್ರವೀಣ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದ ಬಿಜೆಪಿ ಸರಕಾರ ಅದೇ ರೀತಿ ಅನ್ಯಾಯವಾಗಿ ಪ್ರಾಣ ಕಳಕೊಂಡ ಫಾಝಿಲ್, ಮಸೂದ್ , ಜಲೀಲ್, ಸಮೀರ್ ಅವರಿಗೆ ಕನಿಷ್ಠ ಸಾಂತ್ವನವನ್ನೂ ಹೇಳಿರಲಿಲ್ಲ. ಅದರೆ ನೂತನ ಕುಮಾರಿಗೆ ಉದ್ಯೋಗ ಕೊಡುವ ಬಗ್ಗೆ ಹೇಳಿದ ಸಿಎಂ ಅದರ ಜೊತೆ ಜೊತೆಗೇ ಫಾಝಿಲ್, ಮಸೂದ್ ಅವರ ಬಗ್ಗೆಯೂ ಹೇಳುತ್ತಾರೆ ಎಂಬ ನಿರೀಕ್ಷೆ ಮುಸ್ಲಿಮ್ ಸಮುದಾಯದಲ್ಲಿತ್ತು. ಆದರೆ ಹಾಗಾಗಲಿಲ್ಲ.
ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರಂಥ ಕಟ್ಟಾ ಜಾತ್ಯತೀತ, ಸೈದ್ಧಾಂತಿಕ ಬದ್ಧತೆಯುಳ್ಳ ನಾಯಕರು ಅಧಿಕಾರದಲ್ಲಿರುವಾಗಲೇ ಮುಸ್ಲಿಮ್ ಸಮುದಾಯಕ್ಕೆ ನ್ಯಾಯ ಸಿಗದೆ ಹೋದರೆ, ಇನ್ನು ಬೇರೆಯವರ ನಾಯಕತ್ವದಲ್ಲಿ ನ್ಯಾಯ ಸಿಕ್ಕೀತು ಎಂದು ಊಹಿಸುವುದೂ ಸಾಧ್ಯವಿಲ್ಲ.