ಬೆಂಗಳೂರು: ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ರೂ. 4,000 ಶುಲ್ಕ!
ಉಬರ್‌ಗೆ ನೋಟಿಸ್ ಜಾರಿಗೊಳಿಸಲು ಸಾರಿಗೆ ಆಯುಕ್ತರ ಸೂಚನೆ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ ತನಕದ ಉಬರ್ ಟ್ರಿಪ್‌ಗೆ ವಿಧಿಸಲಾದ ದುಬಾರಿ ಶುಲ್ಕದ ಸ್ಕ್ರೀನ್ ಶಾಟ್ ಒಂದು ವೈರಲ್ ಆದ ಬೆನ್ನಿಗೇ ಉಬರ್‌ಗೆ ನೋಟಿಸ್ ಜಾರಿಗೊಳಿಸುವಂತೆ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರ್ಜ್ ದರ ವಿಧಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ನೋಟಿಸ್ ಜಾರಿಗೊಳಿಸಲಾಗುತ್ತಿದೆ ಎಂದು ಸಿದ್ದರಾಮಪ್ಪ ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ಟ್ವೀಟ್ ಒಂದನ್ನು ಮಾಡಿ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕ್ಯಾಬ್ ಸವಾರಿಗೆ ಉಬರ್ ಆ್ಯಪ್ ನಲ್ಲಿ ನಿರ್ದಿಷ್ಟಪಡಿಸಲಾದ ದುಬಾರಿ ಶುಲ್ಕದ ಬಗ್ಗೆ ದೂರಿಕೊಂಡಿದ್ದರು. ತಾವು ವಿಮಾನದ ಟಿಕೆಟ್‌ಗೆ ಪಾವತಿಸಿದ ಹಣವನ್ನು ಅವರು ಉಬರ್ ಕ್ಯಾಬ್ ಶುಲ್ಕದೊಂದಿಗೆ ಹೋಲಿಕೆ ಮಾಡಿದ್ದರು. ಅವರ ಸ್ಕ್ರೀನ್‌ಶಾಟ್‌ನಲ್ಲಿ ತಿಳಿಸಿರುವಂತೆ 52 ಕಿಮೀ ದೂರದ ಪ್ರಯಾಣಕ್ಕೆ ಉಬರ್ ಪ್ರೀಮಿಯಂನಲ್ಲಿ ಶುಲ್ಕ ರೂ. 2,584.59 ಹಾಗೂ ಉಬರ್‌ಎಕ್ಸೆಲ್‌ನಲ್ಲಿ ರೂ. 4,051.15 ಎಂದು ತೋರಿಸುತ್ತಿತ್ತು.
“ಬೆಂಗಳೂರು ವಿಮಾನ ನಿಲ್ದಾಣದಿಂದ ಇ-ಸಿಟಿಗೆ ಉಬರ್ ಶುಲ್ಕವು ನಾನು ವಿಮಾನ ಟಿಕೆಟ್‌ಗೆ ಪಾವತಿಸಿದ ಹಣಕ್ಕೆ ಬಹುತೇಕ ಹತ್ತಿರವಾಗಿದೆ,” ಎಂದು ಅವರು ಬರೆದಿದ್ದಾರೆ.
ಕ್ಯಾಬ್ ಸಂಸ್ಥೆಗಳಿಂದ ಸರ್ಜ್ ದರ ವಿಧಿಸುವಿಕೆ ಬೆಂಗಳೂರಿನಲ್ಲಿ ಬಹುಕಾಲದ ಸಮಸ್ಯೆಯಾಗಿದೆ. ಸರಕಾರವು ಸಣ್ಣ ಕ್ಯಾಬ್‌ಗಳಿಗೆ ಮೊದಲ 4 ಕಿಮೀಗೆ ರೂ. 75 ಹಾಗೂ ಐಷಾರಾಮಿ ಕ್ಯಾಬ್‌ಗಳಿಗೆ ರೂ 150 ಎಂದು ನಿಗದಿಪಡಿಸಿದ್ದರೂ 2 ಕಿಮೀ ದೂರದ ಪ್ರಯಾಣಕ್ಕೂ ರೂ 150 ವಿಧಿಸಲಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದವು.