ಮಣಿಪುರ ಹಿಂಸಾಚಾರ: ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸದಿದ್ದರೆ ಪದಕ ವಾಪಸ್; ಕ್ರೀಡಾಳುಗಳ ಎಚ್ಚರಿಕೆ
ಇಂಫಾಲ: ಮಣಿಪುರದ ಹದಿಮೂರು ಪ್ರಮುಖ ಕ್ರೀಡಾಪಟುಗಳು ರಾಜ್ಯದಲ್ಲಿ ಶೀಘ್ರದಲ್ಲೇ ಶಾಂತಿಯನ್ನು ಮರುಸ್ಥಾಪಿಸದಿದ್ದರೆ ತಮ್ಮ ಪದಕಗಳು ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಇಂಫಾಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಕ್ರೀಡಾಪಟಗಳು, ಹಿಂಸಾಚಾರದ ಹಿಂದಿರುವ ಉಗ್ರಗಾಮಿ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಒಲಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು, ವೇಟ್‌ಲಿಫ್ಟರ್ ಕುಂಜರಾಣಿ ದೇವಿ, ಭಾರತೀಯ ಮಹಿಳಾ ಫುಟ್‌ಬಾಲ್ ತಂಡದ ಮಾಜಿ ನಾಯಕಿ ಓನಮ್ ಬೆಮ್ ಬೆಮ್ ದೇವಿ, ಬಾಕ್ಸರ್ ಎಲ್. ಸರಿತಾ ದೇವಿ, ಒಲಿಂಪಿಯನ್ ಜುಡೋಕಾ ಲಿಕ್ಮಾಬಾಮ್ ಶುಶೀಲಾ ದೇವಿ ಮತ್ತು ಬಾಕ್ಸರ್ ಎಲ್ ಇಬೊಮ್ಚಾ ಸಿಂಗ್ ಮೊದಲಾದವರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಕುಕಿ ಗುಂಪುಗಳೊಂದಿಗಿನ ಕಾರ್ಯಾಚರಣೆಯ ಅಮಾನತು ಒಪ್ಪಂದವನ್ನು ಹಿಂಪಡೆಯಲು ಒತ್ತಾಯಿಸಿದ ಕ್ರೀಡಾಪಟುಗಳು, ಕೇಂದ್ರ ಭದ್ರತಾ ಪಡೆಗಳ ನಿಯೋಜನೆಯ ಹೊರತಾಗಿಯೂ ಈ ಸಂಘಟನೆಗಳು ಜನರನ್ನು ಕೊಂದು, ಮನೆಗಳನ್ನು ಸುಡುವ ಮೂಲಕ ಮಣಿಪುರದ ಸಮಗ್ರತೆಗೆ ಸವಾಲು ಹಾಕುತ್ತಿವೆ ಎಂದು ಕ್ರೀಡಾಪಟುಗಳು ಹೇಳಿದ್ದಾರೆ.
ಮಣಿಪುರದಲ್ಲಿ ಶೀಘ್ರದಲ್ಲೇ ಶಾಂತಿಯನ್ನು ಮರುಸ್ಥಾಪಿಸಲು ಕೇಂದ್ರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದರೆ "ನಮ್ಮ ಪ್ರಶಸ್ತಿಗಳನ್ನು ನಾವು ಒಪ್ಪಿಸುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಆದಷ್ಟು ಬೇಗ ರಾಜ್ಯದಲ್ಲಿ ಸಹಜ ಸ್ಥಿತಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳ ದಿಗ್ಬಂಧನದಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಶೀಘ್ರವೇ ಹೆದ್ದಾರಿಗಳ ಮೇಲಿನ ತಡೆಯನ್ನೂ ತೆರವುಗೊಳಿಸಬೇಕೆಂಬ ಬೇಡಿಕೆಯೂ ಕೇಳಿ ಬಂದಿದೆ.