ಸ್ಥಗಿತಗೊಂಡಿರುವ ಸರಕಾರಿ ಬಸ್‌ಗಳನ್ನು ಓಡಿಸಿ: ಸಿಐಟಿಯು ಒತ್ತಾಯ

ಉಡುಪಿ: ಕರ್ನಾಟಕ ರಾಜ್ಯಾದ್ಯಂತ ಜೂನ್ 1ರಿಂದ ಸರಕಾರಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದನ್ನು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಸ್ವಾಗತಿಸಿದೆ.
ಆದರೆ ಉಡುಪಿ ಜಿಲ್ಲೆಯಲ್ಲಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ನಗರ ಸಾರಿಗೆ ನರ್ಮ್ ಬಸ್‌ಗಳು ಕೊರೋನಾ ಕಾಲದಲ್ಲಿ ತನ್ನ ಸಂಚಾರವನ್ನು ಸ್ಥಗಿತ ಗೊಳಿಸಿದ ಕಾರಣ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಬಂದು ಪ್ರಯಾಣಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಮತ್ತು ಹೆಚ್ಚುವರಿ ಸರಕಾರಿ ಬಸ್ ಓಡಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಸಿಐಟಿಯು ರಾಜ್ಯ ಸರಕಾರ ಹಾಗೂ ಸಾರಿಗೆ ಇಲಾಖೆಯನ್ನು ಆಗ್ರಹಿಸಿದೆ.
ಅನೇಕ ಸಂಘ ಸಂಸ್ಥೆಗಳು ಈ ಕುರಿತು ಮನವಿ ಸಲ್ಲಿಸಿದ್ದರೂ ಖಾಸಗಿ ಬಸ್ ಮಾಲಕರ ಒತ್ತಡದಿಂದ ಇಂದು ಜಾರಿಗೊಂಡಿಲ್ಲ. ಅಲ್ಲದೇ ಏರಿಸಿದ ಬಸ್ ದರವನ್ನು ಕಡಿಮೆ ಮಾಡಿಲ್ಲ. ಆದ್ದರಿಂದ ಸರಕಾರದಿಂದ ಮಂಜೂರಾಗಿ ಪರವಾನಿಗೆ ಪಡೆದ ಎಲ್ಲಾ ಸರಕಾರಿ ಬಸ್ಸು ಸಂಚಾರ ಸೇವೆಯನ್ನು ಮುಂದುವರಿಸಲು ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಕರ್ನಾಟಕ ರಾಜ್ಯ ಸರಕಾರವನ್ನು, ಸಾರಿಗೆ ಸಚಿವರನ್ನು ಒತ್ತಾಯಿಸಿದೆ.
ನರ್ಮ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸುಮಾರು 55ರಷ್ಟು ನಗರ ಸಾರಿಗೆ ಬಸ್ಸುಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು. ಖಾಸಗಿ ಬಸ್ಸು ಮಾಲಕರ ವಿರೋಧದ ನಡುವೆಯೂ ಆಶಾದಾಯಕ ಸೇವೆಯನ್ನು ಸಲ್ಲಿಸುತಿದ್ದವು. ಆದರೆ ಕೊರೋನಾ ಕಾಲದಲ್ಲಿ ಸ್ಥಗಿತ ಗೊಂಡಿರುವ ಸರಕಾರಿ ಬಸ್ ಸಂಚಾರ ಸೇವೆಯು ಮತ್ತೆ ಹಿಂದಿನ ರೀತಿಯಲ್ಲಿ ನೀಡಲೇ ಇಲ್ಲ ಎಂದು ಸಮಿತಿ ದೂರಿದೆ.
ಸರಕಾರಿ ನರ್ಮ್ ನಗರ ಸಾರಿಗೆ ಬಸ್ಸು ಮತ್ತು ಗ್ರಾಮೀಣ ಭಾಗದ ಸರಕಾರಿ ಬಸ್ ಸಂಚಾರ ಸೇವೆಯಲ್ಲಿ ಅರ್ಧಕ್ಕರ್ಧ ವ್ಯತ್ಯಯ ಉಂಟಾಗಿದೆ. ಜಿಲ್ಲೆಯಲ್ಲಿ ಖಾಸಗೀ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗತೊಡಗಿದೆ. ಇದರಿಂದಾಗಿ ಬಹುತೇಕ ಕಡಿಮೆ ಆದಾಯಕ್ಕೆ ದುಡಿಯುವ ಜನ ಸಾಮಾನ್ಯರು ಸಮಸ್ಯೆಯನ್ನು ಅನುಭವಿಸುವಂತಾಗಿದೆ ಎಂದು ಸಿಐಐಟಿಯು ಅಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂನ್ 1ರಿಂದ ಸರಕಾರ ಘೋಷಿಸಿದ ಕೆಎಸ್ಸಾರ್ಟಿಸಿಯಲ್ಲಿ ಮಹಿಳೆ ಯರಿಗೆ ಉಚಿತ ಪ್ರಯಾಣ ಸೇವೆಯು ಜಿಲ್ಲೆಯ ಮಹಿಳೆಯರಿಗೂ ಸಿಗುವಂತಾಗಬೇಕು. ಬೀಡಿ ಉದ್ದಿಮೆ ನೆಲಕ್ಕಚ್ಚಿದ ನಂತರ ಈಗ ಮಹಿಳೆ ಯರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳಲ್ಲಿ, ಬಟ್ಟೆಯಂಗಡಿಗಳಲ್ಲಿ, ಆಸ್ಪತ್ರೆ, ಕಾಲೇಜುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಅಂತ ಮಹಿಳೆಯರಿಗೆ ಸರಕಾರದ ಈ ಯೋಜನೆಯು ಅನುಕೂಲಕರವಾಗಲಿದೆ ಎಂದು ಸಮಿತಿ ಹೇಳಿದೆ.
ಆದ್ದರಿಂದ ಉಡುಪಿ ಜಿಲ್ಲಾದ್ಯಂತ ಸ್ಥಗಿತಗೊಂಡಿರುವ ಕೆಎಸ್ಸಾರ್ಟಿಸಿ ಸರಕಾರಿ ಬಸ್‌ಗಳು ತನ್ನ ಸಂಚಾರ ಸೇವೆಯನ್ನು ಈ ಕೂಡಲೇ ಮುಂದು ವರಿಸಲು ಕ್ರಮ ಕೈಗೊಳ್ಳಬೇಕೆಂದು ಮತ್ತು ಜನರ ಬೇಡಿಕೆಯ ಅನುಗುಣವಾಗಿ ಮಂಜೂರಾಗದೆ ಬಾಕಿ ಇರುವ ಪ್ರದೇಶಗಳಿಗೂ ಶೀಘ್ರವೇ ಬಸ್ ಸಂಚಾರ ಸೇವೆ ಒದಗಿಸಲು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.