ಉಡುಪಿ: ಕಾರ್ಮಿಕ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಉಡುಪಿ, ಮೇ 31: ಜಿಲ್ಲೆಯ ಕಾರ್ಮಿಕ ಅಧಿಕಾರಿ ಕುಮಾರ್ ಅವರ ಕೊರಂಗ್ರಪಾಡಿಯ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ಎರಡು ತಂಡಗಳು ದಾಳಿ ನಡೆಸಿದ್ದು, ಆದಾಯ, ಆಸ್ತಿಪಾಸ್ತಿಗಳ ವಿವರ, ಚಿನ್ನಾಭರಣಗಳ ಮಾಹಿತಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸುತಿದ್ದಾರೆ.
ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಗೂ ದಾಳಿ ನಡೆಸಿರುವ ಅಧಿಕಾರಿಗಳ ತಂಡ ಅಲ್ಲಿಯೂ ಕೆಲ ಕಾಲ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಲೋಕಾಯುಕ್ತದ ಪೊಲೀಸ್ ಅಧೀಕ್ಷಕ ಸಿ.ಎ ಸೈಮನ್ ಇವರ ನಿದರ್ಶನದಂತೆ ಉಡುಪಿ ಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕ ಕೆ.ಸಿ ಪ್ರಕಾಶ್, ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಪೊಲೀಸ್ ನಿರೀಕ್ಷಕ ರಫೀಕ್ ಎಂ ಇವರ ತಂಡ ಉಡುಪಿ ಕಾರ್ಮಿಕ ಅಧಿಕಾರಿ ಕುಮಾರ್ ಬಿ. ಅರ್ ಇವರ ಮನೆ ಹಾಗೂ ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ವೇಳೆ ಅಪಾರ ಪ್ರಮಾಣದ ಸಂಪತ್ತು ಮಾಡಿರುವುದು ಕಂಡು ಬರುತ್ತದೆ. ಲೋಕಾಯುಕ್ತ ಅಧಿಕಾರಿಗಳು ವಿವಿಧ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದು ತನಿಖೆ ಮುಂದುವರಿಯುತಿದೆ.
ಕುಮಾರ್ ಅವರ ಕೊರಂಗ್ರಪಾಡಿ ಮನೆಯಲ್ಲಿ ಐಶಾರಾಮಿ ಕಾರು, ಚಿನ್ನಾಭರಣ, ಬೆಳೆಬಾಳುವ ಪೀಠೋಪಕರಣ ಗಳು, ಲಕ್ಷಾಂತರ ರೂ. ನಗದು ಹಾಗೂ ಹೊರಜಿಲ್ಲೆಗಳಲ್ಲಿರುವ ನಿವೇಶನಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಇಂದು ಮುಂಜಾನೆ ಪ್ರಾರಂಭಗೊಂಡ ಕಾರ್ಯಾಚರಣೆ ತಡರಾತ್ರಿಯವರೆಗೂ ಮುಂದುವರಿದಿತ್ತು. ಗುರುವಾರವೂ ಬ್ಯಾಂಕ್ ದಾಖಲೆ ಹಾಗೂ ಲಾಕರ್‌ಗಳ ಪರಿಶೀಲನೆ ನಡೆಯಲಿದೆ ಎಂದು ತಿಳಿದುಬಂದಿದೆ.