1.15 ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ವಿಶ್ವನಾಥ್ ಶೆಟ್ಟಿ ಪೊಲೀಸ್ ಕಸ್ಟಡಿಗೆ
ಉಡುಪಿ ನಗರ ಠಾಣೆಯಲ್ಲಿ ಮತ್ತೊಂದು ದೂರು ದಾಖಲು

ಮಂಗಳೂರು, ಮೇ 31: 1.15 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ್ ಶೆಟ್ಟಿಯನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಈ ವಂಚನೆ ಪ್ರಕರಣದಲ್ಲಿ ಆರೋಪಿ ವಿಶ್ವನಾಥ್ ಶೆಟ್ಟಿ ಸಹಚರ ಮುಂಬೈ ನಿವಾಸಿ ಕದಂ ಎಂಬಾತನ ಬಂಧನಕ್ಕೆ ಪೊಲೀಸರು ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇದಕ್ಕಾಗಿ ಮಂಗಳೂರು ನಗರ ಪೊಲೀಸರ ಒಂದು ತಂಡ ಈಗಾಗಲೇ ಮುಂಬೈಗೆ ತೆರಳಿದೆ. ಅಲ್ಲಿನ ಕ್ರೈಂ ಬ್ರಾಂಚ್ ಪೋಲಿಸರ ಸಹಾಯ ಪಡೆದು ಆರೋಪಿ ಬಂಧನಕ್ಕೆ ಯತ್ನ ನಡೆಯುತ್ತಿದೆ. ಇನ್ನೆರಡು ದಿನಗಳ ಒಳಗಾಗಿ ಆರೋಪಿ ಕದಂ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ.
ಈ ನಡುವೆ ಬೆಳ್ಳಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಿವಾಸಿ ಅಲ್ತಾಫ್ ಎಂಬವರಿಗೆ ಆರೋಪಿ ಕಳತ್ತೂರು ವಿಶ್ವನಾಥ ಶೆಟ್ಟಿ 15 ಲಕ್ಷ ರೂ. ಗಳನ್ನು ವಂಚಿಸಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ‘ರೋಹನ್ ಕಾರ್ಪೊರೇಷನ್’ನ ಆಡಳಿತ ನಿರ್ದೇಶಕ ರೋಹನ್ ಮಂತೆರೋ ಮತ್ತು ತೊಕ್ಕೊಟ್ಟಿನ ‘ಹರ್ಷ ಫೈನಾನ್ಸ್’ ಮಾಲಕ ಹರೀಶ್ ಅವರಿಗೆ ಆರೋಪಿ ವಂಚನೆ ನಡೆಸಿರುವ ಬಗ್ಗೆ ಮಂಗಳೂರು ನಗರ ಪೋಲೀಸರು ಕೇಸು ದಾಖಲಿಸಿಕೊಂಡಿದ್ದರು. ಬಳಿಕ ಮುಂಬೈ ಕ್ರೈಂ ಬ್ರಾಂಚ್ ಪೋಲಿಸರ ಸಹಾಯ ಪಡೆದು ಆರೋಪಿ ವಿಶ್ವನಾಥ್ ಶೆಟ್ಟಿ ಚಲನವಲದ ಬಗ್ಗೆ ತೀವ್ರ ನಿಗಾ ಇರಿಸಲಾಗಿತ್ತು. ಮುಂಬೈ ಪೊಲೀಸರು ನೀಡಿದ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಆರೋಪಿ ಕಳತ್ತೂರು ವಿಶ್ವನಾಥ್ ಶೆಟ್ಟಿ ವಿರುದ್ಧ ಇನ್ನೂ ಕೆಲ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಬಿ ಎಸಿಪಿ ಪರಮೇಶ್ವರ ಹೆಗಡೆ ನಿರ್ದೇಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶ್ಯಾಮ್‌ಸುಂದರ್ ಮತ್ತು ಸೆನ್ ವಿಭಾಗದ ಇನ್‌ಸ್ಪಕ್ಟರ್ ಸತೀಶ್ ತನಿಖೆ ಮುಂದುವರಿಸಿದ್ದಾರೆ.
ಮುಂಬೈಯಲ್ಲಿ ಕದಂ ಬಂಧನ
1.15 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿ ವಿಶ್ವನಾಥ್ ಶೆಟ್ಟಿ ಸಹಚರ ಮುಂಬೈ ನಿವಾಸಿ ಕದಂ ಎಂಬಾತನನ್ನು ಇಂದು ಬೆಳಗ್ಗೆ ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಆರೋಪಿಯ ಬಂಧನಕ್ಕಾಗಿ ಮಂಗಳೂರಿನಿಂದ ಮುಂಬೈಗೆ ತೆರಳಿದ್ದ ಸಿಸಿಬಿ ಪೊಲೀಸರ ತಂಡ, ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರ ನೆರವಿನಿಂದ ಇಂದು ಬೆಳಗ್ಗೆ ಕದಂನನ್ನು ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.
ಆರೋಪಿಗಳಾದ ಕಳತ್ತೂರು ವಿಶ್ವನಾಥ ಶೆಟ್ಟಿ ಹಾಗೂ ಕದಂ ಇಬ್ಬರೂ ಸೇರಿ ಸಂಚು ರೂಪಿಸಿ 300 ಕೋಟಿ ರೂ.ಸಾಲ ತೆಗೆಸಿ ಕೊಡುವ ಭರವಸೆ ನೀಡಿ ಈ ವಂಚನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.