ನ್ಯಾ.ಬಿ.ವೀರಪ್ಪ ಅವರ ತೀರ್ಪುಗಳು ನ್ಯಾಯಾಂಗ ವ್ಯವಸ್ಥೆ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಮಗೆ ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡಾಗ ಮಾತ್ರ ಬದುಕು ಸಾರ್ಥಕ ಆಗುತ್ತದೆ. ಉತ್ತಮ ನ್ಯಾಯದಾನದ ಮೂಲಕ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಮ್ಮ ಬದುಕು ಮತ್ತು ವೃತ್ತಿಯನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು ವಕೀಲರ ಸಂಘ ಬುಧವಾರ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಬಿ.ವೀರಪ್ಪ ಅವರು ನ್ಯಾಯಮೂರ್ತಿ ಆಗುವಾಗಲೂ ನಾನು ಮುಖ್ಯಮಂತ್ರಿ ಆಗಿದ್ದೆ. ಈಗ ಇವರ ನಿವೃತ್ತಿ ಸಂದರ್ಭದಲ್ಲೂ ನಾನು ಮುಖ್ಯಮಂತ್ರಿ ಆಗಿರುವುದು ಸುಸಂದರ್ಭ. ನಮಗೆ ಉನ್ನತ ಸ್ಥಾನ ಸಿಕ್ಕಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಿದರೆ ಆ ಸ್ಥಾನದ ಘನತೆ ಹೆಚ್ಚುತ್ತದೆ ಎಂದರು.
ಸಮಾಜದ ಅರಿವಿದ್ದವರು, ಬದುಕನ್ನು ಅರ್ಥ ಮಾಡಿಕೊಂಡವರು, ಜನರ ಸಂಕಷ್ಟಗಳನ್ನು ಅನುಭವಿಸಿದ್ದವರು, ಆ ಬಗ್ಗೆ ಸಹಾನುಭೂತಿ ಹೊಂದಿದ್ದವರು ಮಾತ್ರ ಸಮಾಜಮುಖಿಯಾಗಿದ್ದು ಉನ್ನತ ಸ್ಥಾನದ ಘನತೆ ಹೆಚ್ಚಿಸಬಲ್ಲರು. ಬಿ.ವೀರಪ್ಪ ಅವರು ದಕ್ಷತೆ, ಪ್ರಾಮಾಣಿಕತೆ ಜತೆಗೆ ವಕೀಲ ಸಮೂಹದ ಪ್ರೀತಿಯನ್ನೂ ಗಳಿಸಿದ್ದರು ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ವಕೀಲ ಸಮೂಹವೇ ಸಾಕ್ಷಿ ಎಂದು ಹೇಳಿದರು.
ದುರ್ಬಲ ವರ್ಗದವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ, ಕೆಳ ಹಂತದಲ್ಲೇ ದುರ್ಬಲ ವರ್ಗಗಳಿಗೆ ನ್ಯಾಯ ಸಿಗುವಂತಾಗಬೇಕು. ಬಿ.ವೀರಪ್ಪ ಅವರು ಈ ದೃಷ್ಟಿಯಲ್ಲಿ ಮೌಲ್ಯಯುತವಾದ ತೀರ್ಪುಗಳನ್ನು ನೀಡಿದ್ದಾರೆ. ಇವು ಕಿರಿಯ ವಕೀಲರಿಗೆ ಮಾದರಿ ಆಗಿವೆ ಎಂದರು.
‘ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಸ್ಪಂದಿಸುವ ಗುಣ ಇಲ್ಲದಿದ್ದರೆ ಮುಖ್ಯಮಂತ್ರಿ ಆಗಿರಲಿ, ಮುಖ್ಯ ನ್ಯಾಯಮೂರ್ತಿ ಆಗಿರಲಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.