ಥಾಯ್ಲೆಂಡ್ ಓಪನ್ : ಶಿ ಯುಕಿಗೆ ಆಘಾತಕಾರಿ ಸೋಲುಣಿಸಿದ ಕಿರಣ್ ಜಾರ್ಜ್
ಸೈನಾ, ಅಶ್ಮಿತಾ ಚಾಲಿಹಗೆ ಜಯ ► ಸಿಂಧೂ ಮೊದಲ ಸುತ್ತಿನಲ್ಲೇ ನಿರ್ಗಮನ
ಬ್ಯಾಂಕಾಕ್, ಮೇ 31: ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬುಧವಾರ ಭಾರತದ ಕಿರಣ್ ಜಾರ್ಜ್ ಒಂಭತ್ತನೇ ವಿಶ್ವ ರ್ಯಾಂಕಿಂಗ್‌ನ ಚೀನಾದ ಶಿ ಯುಕಿಗೆ ಆಘಾತಕಾರಿ ಸೋಲುಣಿಸಿದರು. ಇದರೊಂದಿಗೆ ಅವರು ಪಂದ್ಯಾವಳಿಯ ಪ್ರಿಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಒಡಿಶಾ ಓಪನ್ ವಿಜೇತ ಕಿರಣ್, 3ನೇ ಶ್ರೇಯಾಂಕದ ಶಿ ಯುಕಿಯನ್ನು 21-18, 22-20 ಗೇಮ್‌ಗಳಿಂದ ಸೋಲಿಸಿದರು. ಶಿ ಯುಕಿ 2018ರ ವಿಶ್ವ ಚಾಂಪಿಯನ್‌ಶಿಪ್ಸ್‌ನ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಕಿರಣ್ ಪ್ರಕಾಶ್ ಪಡುಕೋಣೆ ಅಕಾಡಮಿಯ ವಿದ್ಯಾರ್ಥಿಯಾಗಿದ್ದಾರೆ. ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ವೆಂಗ್ ಹೊಂಗ್ ಯಾಂಗ್‌ರನ್ನು ಎದುರಿಸಲಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನ ಪಂದ್ಯವೊಂದರಲ್ಲಿ, ಭಾರತದ ಅಶ್ಮಿತಾ ಚಾಲಿಹ ತನ್ನದೇ ದೇಶದ ಮಾಳವಿಕಾ ಬನ್ಸೋಡ್‌ರನ್ನು 21-17, 21-14 ಗೇಮ್‌ಗಳಿಂದ ಸೋಲಿಸಿದರು. ಅವರು ಮುಂದಿನ ಸುತ್ತಿನಲ್ಲಿ ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ, ನಾಲ್ಕನೇ ಶ್ರೇಯಾಂಕದ ಕ್ಯಾರಲೈನ ಮಾರಿನ್‌ರನ್ನು ಎದುರಿಸಲಿದ್ದಾರೆ. ಇನ್ನೊಂದು ಮೊದಲ ಸುತ್ತಿನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸೈನಾ ನೆಹ್ವಾಲ್ ಕೆನಡದ ವೆನ್ ಯು ಝಾಂಗ್‌ರನ್ನು 21-13, 21-17 ಗೇಮ್‌ಗಳಿಂದ ಮಣಿಸಿದರು.
ಸಿಂಧೂಗೆ ಸೋಲು: ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ ಬುಧವಾರ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಅವರನ್ನು ಕೆನಡದ ಮಿಶೆಲ್ ಲಿ 21-8, 18-21, 21-18 ಗೇಮ್‌ಗಳಿಂದ ಮಣಿಸಿದರು.