ದುಶ್ಚಟ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಾಣವಾದರೆ, ಬಲಿಷ್ಟ ಸಮಾಜ ನಿರ್ಮಾಣ ಸಾಧ್ಯ: ಯು.ಟಿ. ಖಾದರ್

ಬೆಂಗಳೂರು: ದುಶ್ಚಟ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಾಣವಾದಲ್ಲಿ, ಬಲಿಷ್ಠ ದೇಶ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಬುಧವಾರ ನಗರದ ಬೆಂಗಳೂರು ವೈದ್ಯಕೀಯ ಕಾಲೇಜು ವತಿಯಿಂದ ನಗರದ ಫ್ರೀಡಂಪಾರ್ಕ್‍ನಲ್ಲಿ ಆಯೋಜಿಸಿದ್ದ ‘ವಿಶ್ವ ತಂಬಾಕು ರಹಿತ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವಿಷ್ಯದ ಯುವಪೀಳಿಗೆಗೆ ತಂಬಾಕು ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ದುಶ್ಚಟ ಮುಕ್ತ ಹಾಗೂ ದ್ವೇಷ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದರು.
ಸರಕಾರವು ತಂಬಾಕನ್ನು ಸಂಪೂರ್ಣ ನಿಷೇಧ ಮಾಡುತ್ತದೆ. ಆದರೆ, ಇದಕ್ಕೆ ಜನಸಾಮಾನ್ಯರ ಸಂಪೂರ್ಣ ಬೆಂಬಲ ನೀಡಿದರೆ ಮಾತ್ರ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ನಾನು ಆರೋಗ್ಯ ಸಚಿವನಾಗಿದ್ದಾಗ, ಶಾಲಾ-ಕಾಲೇಜು ಸುತ್ತಲಿನ ಪ್ರದೇಶದಲ್ಲಿ ತಂಬಾಕು ಮಾರಾಟ ನಿಷೇಧ ಮಾಡಲಾಯಿತು. ಸಿಗರೇಟ್ ಪ್ಯಾಕ್‍ನ ಮೇಲೆ ಆರೋಗ್ಯಕ್ಕೆ ಹಾನಿಕರ ಎಂಬ ಸಾಲಿನ ಜತೆಗೆ ಕ್ಯಾನ್ಸರ್ ಪೀಡಿತ ರೋಗಿಯ ಫೋಟೋವನ್ನು ಹಾಕಲು ಆದೇಶ ಮಾಡಲಾಯಿತು ಎಂದು ಅವರು ಹೇಳಿದರು.
ದುಶ್ಚಟಕ್ಕೆ ದಾಸರಾಗಿ ಆಸ್ಪತ್ರೆ ವಾಸಿಗಳಾದರೆ, ತಮ್ಮ ಕುಟಂಬ ಕಷ್ಟ ಅನುಭವಿಸುವುದರ ಜೊತೆಗೆ ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಭವಿಷ್ಯದ ಮಕ್ಕಳಿಗೂ ಉತ್ತಮ ಸಮಾಜ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಇದಕ್ಕೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಖಾದರ್ ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ತಂಬಾಕು ಸೇವನೆ ಸಾಮಾನ್ಯವಾಗಿ ಚಿಕ್ಕವಯಸ್ಸಿನಲ್ಲಿ ಅಭ್ಯಾಸವಾಗುತ್ತದೆ. ಇದರಿಂದಾಗಿ ಜೀವನಪೂರ್ತಿ ಅನಾರೋಗ್ಯದಿಂದ ಬಳಲಬೇಕಾಗುತ್ತದೆ. ಆದುದರಿಂದ ನಿಮ್ಮ ಸುತ್ತ-ಮುತ್ತಲಿನವರು ಸಿಗರೇಟ್, ಬೀಡಿ, ಇನ್ನಿತರೆ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದರೆ, ಅವರಿಗೆ ತಂಬಾಕು ಸೇವನೆಯಿಂದಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಯುವ, ಕ್ರೀಡಾ ಸಚಿವ ಬಿ.ನಾಗೇಂದ್ರ ಮಾತನಾಡಿ, ತಂಬಾಕನ್ನು ನಿಷೇಧ ಮಾಡಲು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುತ್ತದೆ. ಅದೇ ಒಂದು ಸಿಗರೇಟ್ ಹಣಕ್ಕೆ ಮೊಟ್ಟೆ ಅಥವಾ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜು ಮುಖ್ಯಸ್ಥ ಡಾ. ರಮೇಶ್ ಕೃಷ್ಣನ್, ತಂಬಾಕು ನಿಯಂತ್ರಣ ಕಮಿಟಿಯ ಸದಸ್ಯ ಡಾ. ವಿಶಾಲ್‍ರಾವ್, ಡಾ. ರಿಯಾಜ್, ಡಾ. ತ್ರಿವೇಣಿ ಸೇರಿದಂತೆ ವಿದ್ಯಾರ್ಥಿಗಳು, ಎನ್‍ಎಸ್‍ಎಸ್ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ನಗರದ ವಿವಿಧ ಭಾಗಗಳಲ್ಲಿ ಸೈಕಲ್ ಜಾಥಾ ನಡೆಸಿ ತಂಬಾಕು ತ್ಯಜಿಸುವಂತೆ ಅರಿವು ಮೂಡಿಸಿದರು.