ದಾವಣಗೆರೆ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆ; 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ದಾವಣಗೆರೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ತಂದೆಗೆ ಇಲ್ಲಿನ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ, ಶೀಘ್ರಗತಿ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಹರಿಹರ ತಾಲೂಕಿನ ದುರುಗಪ್ಪ ಶಿಕ್ಷೆಗೊಳಗಾದ ಅಪರಾಧಿ. ಈತ ಅಪ್ರಾಪ್ತೆಯಾದ ತನ್ನ ಮಗಳಿಗೆ ತಿಂಡಿ, ಬಟ್ಟೆ ಕೊಡಿಸುತ್ತಾ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವಳನ್ನು ಹೆದರಿಸಿ ಅತ್ಯಾಚಾರ ಮಾಡುತ್ತಾ ಬಂದಿದ್ದ. ಅಲ್ಲದೇ ರಾಜ್ಯ ಹೆದ್ದಾರಿಯ ಬಳಿಯೊಂದರಲ್ಲಿ ಖಾಲಿ ಜಾಗದಲ್ಲಿ ತಗಡಿನ ಶೀಟ್‌ನಿಂದ ನಿರ್ಮಿಸಿದ ಮನೆಯ ಹಿಂದೆ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಬಗ್ಗೆ ಹರಿಹರ ವೃತ್ತ ನಿರೀಕ್ಷಕ ಶಿವಪ್ರಸಾದ್ ಎಂ. ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀಪಾದ ಎನ್. ಅವರು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ12,000 ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲ ಸಂತ್ರೆಸ್ತೆಗೆ 5ಲಕ್ಷ ರೂ ಪರಿಹಾರವನ್ನು ಸರ್ಕಾರದಿಂದ ನೀಡಬೇಕು ಎಂದು ಆದೇಶ ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುನಂದಾ ಈಶ್ವರಪ್ಪ ಮಡಿವಾಳರ ಅವರು ಸಾಕ್ಷಿದಾರರ ವಿಚಾರಣೆ ಮಾಡಿದ್ದು, ಕೆ.ಜಿ.ಜಯಪ್ಪ ವಾದ ಮಂಡಿಸಿದ್ದಾರೆ.







