ತನ್ನ ಐಫೋನ್ ಟ್ಯಾಪ್ ಆಗುತ್ತಿರಬಹುದು ಎಂದು ಆರೋಪಿಸಿದ ರಾಹುಲ್ ಗಾಂಧಿ
ಫೋನ್ ಎತ್ತಿಕೊಂಡು “ಹಲೋ ಮಿಸ್ಟರ್ ಮೋದಿ” ಎಂದ ಕಾಂಗ್ರೆಸ್ ನಾಯಕ

ವಾಷಿಂಗ್ಟನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಅಮೆರಿಕಾದ ಸಿಲಿಕಾನ್ ವ್ಯಾಲಿಯ ಸ್ಟಾರ್ಟ್-ಅಪ್ ಉದ್ಯಮಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಪ್ಲಗ್ ಎಂಡ್ ಪ್ಲೇ ಸಭಾಂಗಣದಲ್ಲಿ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತಿತರ ಸಹವರ್ತಿಗಳ ಜೊತೆಗೆ ರಾಹುಲ್ ಅವರು ಸ್ಟಾರ್ಟ್ –ಅಪ್ ಉದ್ಯಮಿಗಳೊಂದಿಗೆ ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಮಶೀನ್ ಲರ್ನಿಂಗ್ ಮುಂತಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ಪ್ಲಗ್ ಎಂಡ್ ಪ್ಲೇ ಸೆಂಟರ್ ಸಿಇಒ ಮತ್ತು ಸ್ಥಾಪಕ ಸಯೀದ್ ಅಮೀದಿ ಹಾಗೂ ಫಿಕ್ಸ್‌ನಿಕ್ಸ್ ಸ್ಟಾರ್ಟ್ ಅಪ್ ಸ್ಥಾಪಕ ಶೌನ್ ಶಂಕರನ್ ಜೊತೆಗೂ ಸಂವಹನ ನಡೆಸಿದ ರಾಹುಲ್, ತಂತ್ರಜ್ಞಾನದ ಕುರಿತಾದ ಸಾಕಷ್ಟು ಮಾಹಿತಿ ವಿನಿಮಯ ಮಾಡಿಕೊಂಡರು.
ಈ ಸಂದರ್ಭ ಪೆಗಾಸಸ್ ಸ್ಪೈವೇರ್ ಮತ್ತು ಅಂತಹುದೇ ತಂತ್ರಜ್ಞಾನಗಳ ಬಗ್ಗೆಯೂ ಉಲ್ಲೇಖಿಸಿದ ರಾಹುಲ್ ಒಂದು ಹಂತದಲ್ಲಿ ತಮ್ಮ ಫೋನ್ ಟ್ಯಾಪ್ ಆಗುತ್ತಿದೆ ಎಂದು ತಮಗೆ ತಿಳಿದಿದೆ ಎಂದರು. ನಂತರ ಹಾಸ್ಯಭರಿತರಾಗಿ ತಮ್ಮ ಐಫೋನ್ ಎತ್ತಿಕೊಂಡು “ಹಲೋ! ಮಿಸ್ಟರ್ ಮೋದಿ,” ಎಂದು ಹೇಳಿದರು.
“ನನ್ನ ಐಫೋನ್ ಟ್ಯಾಪ್ ಆಗುತ್ತಿದೆ ಅಂದುಕೊಂಡಿದ್ದೇನೆ. ಡೇಟಾ ಮಾಹಿತಿ ಹಾಗೂ ಗೌಪ್ಯತೆ ಕುರಿತಂತೆ ನಿಯಮಗಳ ಅಗತ್ಯವಿದೆ,” ಎಂದು ಅವರು ಹೇಳಿದರು.
“ನಿಮ್ಮ ಫೋನ್ ಟ್ಯಾಪ್ ಮಾಡಬೇಕೆಂದು ಒಂದು ದೇಶ ನಿರ್ಧರಿಸಿದರೆ, ಅದನ್ನು ನಿಲ್ಲಿಸಲಾಗದು ಇದು ನನ್ನ ಅಭಿಪ್ರಾಯ,” ಎಂದು. “ಫೋನ್ ಟ್ಯಾಪಿಂಗ್‌ನಲ್ಲಿ ದೇಶಕ್ಕೆ ಆಸಕ್ತಿಯಿದ್ದರೆ, ಹೋರಾಟ ನಡೆಸಲು ಅರ್ಹವಾದ ಹೋರಾಟ ಇದಾಗದು. ನನಗನಿಸುತ್ತದೆ, ನಾನೇನು ಮಾಡಿದರೂ ಅದು ಸರ್ಕಾರಕ್ಕೆ ತಿಳಿಯುತ್ತದೆ,” ಎಂದು ರಾಹುಲ್ ಹೇಳಿಕೊಂಡರು.